

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಘೋಷಿಸಲಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್ಸ್ಟಾರ್ ರಜನಿಕಾಂತ್, ನಟ ಜೂ.ಎನ್ಟಿಆರ್ ಜತೆಯಾಗಿ ಪ್ರದಾನ ಮಾಡಿದರು. ಈ ಮೂಲಕ ರಾಜ್ ಕುಟುಂಬ ಎರಡನೇ ಸಲ ಕರ್ನಾಟಕ ರತ್ನಕ್ಕೆ ಭಾಜನವಾದಂತಾಗಿದೆ.
ಡಾ.ರಾಜಕುಮಾರ್ ಅವರಿಗೆ 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಅದಾಗಿ 30ನೇ ವರ್ಷದಲ್ಲಿ ಪುತ್ರ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಕರ್ನಾಟಕ ರತ್ನಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿ ಮೂರು ದಶಕಗಳಲ್ಲಿ 2 ಕರ್ನಾಟಕ ರತ್ನಗಳಿಗೆ ಭಾಜನವಾದ ಹೆಗ್ಗಳಿಕೆ ಡಾ.ರಾಜ್ ಕುಟುಂಬದ್ದಾಗಿದೆ.
ಮೂವತ್ತು ವರ್ಷಗಳ ಅಂತರದಲ್ಲಿ ತಮ್ಮ ಕುಟುಂಬ ಎರಡು ಕರ್ನಾಟಕ ರತ್ನಕ್ಕೆ ಪಾತ್ರವಾದ ಸಂಗತಿಯನ್ನು ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಇಬ್ಬರೂ ಇಂದು ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದರು.