

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಘೋಷಿಸಲಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್ಸ್ಟಾರ್ ರಜನಿಕಾಂತ್, ನಟ ಜೂ.ಎನ್ಟಿಆರ್ ಜತೆಯಾಗಿ ಪ್ರದಾನ ಮಾಡಿದರು.
ಅಪ್ಪು ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಪ್ರದಾನ ಸಂದರ್ಭದಲ್ಲೇ ಮಳೆಯೂ ಸುರಿದಿದ್ದರಿಂದ ವರುಣ ಸಿಂಚನವೂ ಆಯಿತು. ಪ್ರಶಸ್ತಿ ಪ್ರದಾನ ಬಳಿಕ ಮಾತನಾಡಿದ ರಜನಿಕಾಂತ್, ಯಾವುದೇ ಭೇದ-ಭಾವವಿಲ್ಲದೆ ಎಲ್ಲರೂ ಶಾಂತಿಯಿಂದ ಬಾಳಬೇಕು ಎಂದು ದೇವರು, ಅಲ್ಲಾ, ಜೀಸಸ್ನಲ್ಲಿ ಬೇಡಿಕೊಳ್ಳುತ್ತೇನೆ ಎಂದರು. ಅಪ್ಪು ಬಗ್ಗೆ ಜಾಸ್ತಿ ಹೇಳುವುದಿದೆ, ಮಳೆ ಬರುತ್ತಿದೆ, ಮತ್ತೊಮ್ಮೆ ಬಂದು ಮಾತನಾಡುತ್ತೇನೆ ಎಂದರು.
ನಂತರ ರಜನಿಕಾಂತ್, ಸಿಎಂ, ಸಚಿವ ಅಶೋಕ್ ಒಂದೇ ಕಾರಿನಲ್ಲಿ ವಿಧಾನಸೌಧದಿಂದ ಸಿಎಂ ಅವರ ಆರ್.ಟಿ.ನಗರ ನಿವಾಸಕ್ಕೆ ತೆರಳಿದರು. ಪ್ರತ್ಯೇಕವಾಗಿ ಬೇರೆ ಕಾರಿನಲ್ಲಿ ಜೂ.ಎನ್ಟಿಆರ್, ಸಚಿವರಾದ ಸುಧಾಕರ, ಮುನಿರತ್ನ ಹಾಗೂ ಇನ್ನೊಂದು ಕಾರಿನಲ್ಲಿ ಸುಧಾಮೂರ್ತಿ ತೆರಳಿದರು.