

ಸಮರ ಸನ್ನದ್ಧತೆಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ಭಾರತೀಯ ವಾಯುಸೇನೆಯು ಸೋಮವಾರ ಸ್ವದೇಶಿ ನಿರ್ವಿುತ ಲಘು ಯುದ್ಧ ಹೆಲಿಕಾಪ್ಟರ್ (ಎಲ್ಸಿಎಚ್)ನ ಮೊದಲ ಬ್ಯಾಚನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿತು. ಈ ಮೂಲಕ, ಸೇನೆಯ ಕಾದುವ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ. ಈ ಕಾಪ್ಟರನ್ನು ಬೆಂಗಳೂರು ಮೂಲದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತಯಾರಿಸಿದೆ ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ಅತಿ ಎತ್ತರದಲ್ಲಿ ನಿರ್ವಿುಸಲಾದ ಬಂಕರ್ಗಳ ಧ್ವಂಸ ಕಾರ್ಯಾಚರಣೆ ಮತ್ತು ಕಾಡುಗುಡ್ಡಗಾಡುಗಳಂತಹ ದುರ್ಗಮ ಪ್ರದೇಶಗಳಲ್ಲಿ ಕಾರ್ಯಾಚರಣೆಗಾಗಿ ಇದನ್ನು ನಿಯೋಜಿಸಲಾಗುತ್ತದೆ. ಈ ವಿಮಾನ ಅವಳಿ ಎಂಜಿನ್ ಹೊಂದಿದ್ದು, 5.8 ಟನ್ ತೂಕವಿದೆ. ಎತ್ತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಅನುವಾಗುವಂತೆ ವಿನ್ಯಾಸ ಮಾಡಲಾಗಿದೆ. ರಷ್ಯಾ ನಂತರದಲ್ಲಿ ಇಂಥ ವಿಮಾನ ಅಭಿವೃದ್ಧಿಪಡಿಸಿದ ದೇಶ ಭಾರತ. ಇದಕ್ಕೆ ‘ಪ್ರಚಂಡ’ ಎಂದು ಹೆಸರಿಡಲಾಗಿದ್ದು, ಒಟ್ಟಾರೆಯಾಗಿ ಭಾರತೀಯ ಸೇನೆಗೆ 95 ಎಲ್ಸಿಎಚ್ಗಳನ್ನು ಸೇರ್ಪಡೆ ಮಾಡುವ ಯೋಜನೆಯಿದೆ. ಇದರಲ್ಲಿ ಸಿಂಹಪಾಲು ಅಂದರೆ 65 ವಿಮಾನಗಳು ವಾಯುಸೇನೆಗೆ ಸೇರಲಿವೆ. ಭಾರತವು ರಕ್ಷಣಾ ಸಾಮಗ್ರಿಗಳಿಗಾಗಿ ಬಹುತೇಕವಾಗಿ ಅನ್ಯದೇಶಗಳನ್ನು ಅವಲಂಬಿಸಿದೆ. ಆದರೆ ‘ಆತ್ಮನಿರ್ಭರ’ ಪರಿಕಲ್ಪನೆಯನ್ನು ರಕ್ಷಣಾ ವಲಯಕ್ಕೂ ಅನ್ವಯಿಸಿರುವುದರಿಂದಾಗಿ, ದೇಶೀಯವಾಗಿಯೇ ರಕ್ಷಣಾ ಸಾಮಗ್ರಿಗಳನ್ನು ತಯಾರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದರಿಂದ ಹಲವು ಬಗೆಯ ಪ್ರಯೋಜನವಿದೆ. ರಕ್ಷಣಾ ಸಾಧನಗಳಿಗಾಗಿ ವ್ಯಯಿಸುವ ಹಣದಲ್ಲಿ ಉಳಿತಾಯವಾಗುತ್ತದೆ. ಇದಲ್ಲದೆ, ದೇಶೀಯ ಉತ್ಪಾದನೆಯಿಂದ ಸ್ಥಳೀಯರಿಗೆ ಉದ್ಯೋಗಸೃಷ್ಟಿಗೂ ಅನುಕೂಲವಾಗುತ್ತದೆ.
ಭಾರತ ತಾನಾಗಿ ಇತರ ದೇಶಗಳ ಮೇಲೆ ಯುದ್ಧಸಾರಿದ ನಿದರ್ಶನ ಇಲ್ಲ ಅಥವಾ ಬಲವಂತವಾಗಿ ಅನ್ಯಪ್ರದೇಶಗಳನ್ನು ತನ್ನೊಳಗೆ ಸೇರಿಸಿಕೊಳ್ಳಬೇಕೆಂಬ ಉದ್ದೇಶವನ್ನೂ ಎಂದಿಗೂ ಹೊಂದಿಲ್ಲ. ಆದರೆ, ಈಚಿನ ವರ್ಷಗಳ ಅಂತಾರಾಷ್ಟ್ರೀಯ ಭೂ-ರಾಜಕೀಯ ವ್ಯವಹಾರಗಳು ಬೇರೆಯದೇ ಆದ ದಾರಿಯಲ್ಲಿ ಸಾಗಿರುವುದರಿಂದ ಸ್ವರಕ್ಷಣೆಗೆ ಒತ್ತು ನೀಡುವುದು ಅನಿವಾರ್ಯ. ನೆರೆಯಲ್ಲೇ ಇರುವ ಚೀನಾ ಮತ್ತು ಪಾಕಿಸ್ತಾನ ನಮಗೆ ಎಂದಿಗೂ ತಲೆನೋವೇ ಸರಿ. ಹಿಂದೆ ಅಫ್ಘಾನಿಸ್ತಾನದ ವ್ಯವಹಾರ ಹಾಗೂ ನಂತರದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದ ಕಾರಣಕ್ಕೆ ಅಮೆರಿಕವು ಪಾಕಿಸ್ತಾನಕ್ಕೆ ನೆರವು-ಸಹಕಾರ ನೀಡುತ್ತ ಬಂದಿರುವುದು ಗೊತ್ತಿರುವಂಥದೇ. ಪಾಕ್ನ ನಿಜಬಣ್ಣ ಬಯಲಾದ ಮೇಲೂ ಅಮೆರಿಕ ಪೂರ್ತಿಯಾಗಿ ಪಾಕ್ ಕೈಬಿಟ್ಟಿಲ್ಲ. ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸಲು ಆ ದೇಶಕ್ಕೆ ಅಮೆರಿಕ ಹಣಕಾಸು ನೆರವು ಘೋಷಿಸಿದ್ದು ಇದಕ್ಕೆ ಈಚಿನ ಉದಾಹರಣೆ. ಇಂತಹ ಚದುರಂಗದಾಟಕ್ಕೆ ತಕ್ಕ ಉತ್ತರ ನೀಡಲು ಸದಾ ಸನ್ನದ್ಧವಾಗಿರುವುದು ಬಿಟ್ಟರೆ ಭಾರತದಂತಹ ದೇಶಕ್ಕೆ ಬೇರೆ ದಾರಿ ಇಲ್ಲ. ಇದಲ್ಲದೆ ಹಲವಾರು ರೂಪಗಳಲ್ಲಿ ಎದುರಾಗುವ ಆಂತರಿಕ ಸವಾಲುಗಳು ಸಹ ಬೇರೆ. ದುಷ್ಟ ಸಂಹಾರ-ಶಿಷ್ಟ ರಕ್ಷಣೆಯ ಸಂದೇಶ ನೀಡುವ ನವರಾತ್ರೋತ್ಸವ ಆಚರಣೆ ಈಗ ನಡೆಯುತ್ತಿದೆ. ಸರ್ವಶಕ್ತ್ಯಾತ್ಮಕಳಾದ ದೇವಿಯು ನಾನಾ ಅವತಾರಗಳನ್ನೆತ್ತಿ್ತ ದುರ್ಜನರನ್ನು ನಿಗ್ರಹಿಸಿದ ಸಂಕೇತವಾಗಿ ನವರಾತ್ರಿ ಆಚರಣೆಯನ್ನು ನಾನಾ ವಿಧಗಳಲ್ಲಿ ನಡೆಸಲಾಗುತ್ತದೆ. ದೇಶದ ರಕ್ಷಣೆಯಲ್ಲಿ, ಬಾಹ್ಯ ಶತ್ರುಗಳ ನಿಗ್ರಹದಲ್ಲಿ ಸೇನೆಯ ಪಾತ್ರ ಪ್ರಮುಖವಾದುದು. ಈ ನಿಟ್ಟಿನಲ್ಲಿ ಸೇನೆಯ ಬಲವರ್ಧನೆಗೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.