

ಪ್ರಶ್ನೆ ಪತ್ರಿಕೆ ಸೋರಿಕೆ ಕಾಲ ಈಗ ಇತಿಹಾಸ ಸೇರಿದೆ. ತಂತ್ರಜ್ಞಾನ ಬೆಳೆದಂತೆ ಅಕ್ರಮಗಳಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. ಹಣ ಸಂಪಾದನೆಗೆ ಪರೀಕ್ಷಾ ಅಕ್ರಮಗಳು ದಂಧೆಯಾಗಿವೆ. ಅಕ್ರಮ ಒಂದು ಕಡೆಯಾದರೆ, ಈ ರೀತಿ ವಾಮ ಮಾರ್ಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಆದರೆ ಸಂಬಂಧಪಟ್ಟ ಇಲಾಖೆಗಳ ಪರಿಸ್ಥಿತಿ ಏನು ಎಂಬ ಬಗ್ಗೆ ಕೂಡ ಸರ್ಕಾರ ಚಿಂತನೆ ಮಾಡಬೇಕಿದೆ.
ಪಿಎಸ್ಐ ನೇಮಕಾತಿ ಹಗರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ಹುದ್ದೆಗಳ ನೇಮಕಾತಿಗೆ ಈಚೆಗೆ ನಡೆಸಿದ ಪರೀಕ್ಷೆಗಳಲ್ಲೂ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಮಾದರಿಯನ್ನೇ ಅನುಸರಿಸಲಾಗಿದೆ. ಮತ್ತೂ ವಿಶೇಷ ಎಂದರೆ ಪಿಎಸ್ಐ ಪರೀಕ್ಷಾ ಅಕ್ರಮದ ಸೂತ್ರದಾರರು ಎನ್ನಲಾದ ವ್ಯಕ್ತಿಗಳೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯ ಅಕ್ರಮಗಳಿಗೂ ಕಾರಣರಾಗಿದ್ದಾರೆ. ಏನೇ ಮಾಡಿದರೂ ಶಿಕ್ಷೆಯಿಂದ ಪಾರಾಗಬಹುದು ಎನ್ನುವ ಭಂಡ ಧೈರ್ಯ ಇರುವುದರಿಂದಲೇ ಅಕ್ರಮ ಎಸಗುವವರು ಮತ್ತೆ ಮತ್ತೆ ಇಂಥ ಕೃತ್ಯಗಳಿಗೆ ಕಾರಣರಾಗುತ್ತಿದ್ದಾರೆ.
ಹಣ ಸಂಪಾದನೆ ಮಾಡುವುದು ಒಂದು ಕಡೆಯಾದರೆ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಮಹದಾಸೆ ಹೊಂದಿರುವ ಪುಡಾರಿಗಳು ಈ ಸೂತ್ರದಾರರಲ್ಲಿ ಇದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ. ಇಂಥ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ ರಾಜ್ಯದ ಭವಿಷ್ಯವೇನು ಎಂಬ ಬಗ್ಗೆಯೂ ಚಿಂತನೆ ಮಾಡಬೇಕಾಗಿದೆ. ಯಾವುದೇ ರಾಜಕೀಯ ಪಕ್ಷಗಳಿರಲಿ ಈ ಅಂಶವನ್ನು ಗಂಭೀರವಾಗಿ ಪರಿಗಣಿಸುವುದು ಸೂಕ್ತ.
ಅರ್ಹರು ಮಾತ್ರ ಉದ್ಯೋಗಾವಕಾಶ ಪಡೆಯುವಂತಾಗಲು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆಗಳು ಮೇಲ್ಪಂಕ್ತಿಯಾಗಬೇಕು. ಸೇನಾ ನೇಮಕಾತಿಗಳಲ್ಲಿ ಅನುಸರಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲನೆ ಮಾಡುವ ಬಗ್ಗೆ ಚಿಂತಿಸಬೇಕು. ಅಕ್ರಮ ಎಸಗಿದರೆ ಶಿಕ್ಷೆ ಅಷ್ಟೇ ಅಲ್ಲ, ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅವಕಾಶವೇ ಇಲ್ಲದಂತಾಗಬೇಕು. ಅಕ್ರಮಕ್ಕೆ ಸಹಕಾರ ನೀಡಿದವರಿಗೆ ಕಠಿಣ ಶಿಕ್ಷೆಯೊಂದಿಗೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧೆಗೆ ಅವಕಾಶವಿಲ್ಲದಂತೆ ತಿದ್ದುಪಡಿ ತರಬೇಕು.
ಗೋವಿಂದೇಗೌಡರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಬಗ್ಗೆ ಇಂದಿಗೂ ಚರ್ಚೆಯಾಗುತ್ತಿದೆ. ಈ ರೀತಿ ನಡೆಯುವ ನೇಮಕಾತಿಗಳಿಂದ ಸರ್ಕಾರಕ್ಕೂ ಗೌರವ ಬರುತ್ತದೆ. ಹೀಗಾಗಿ ಹಣ ಇದ್ದರೆ ಸಾಕು, ಯಾವುದೇ ಇಲಾಖೆಯಲ್ಲಿ ಉದ್ಯೋಗ ಸಂಪಾದನೆ ಮಾಡಬಹುದು ಎನ್ನುವ ಭಾವನೆಯನ್ನು ತೊಲಗಿಸಿ ಅರ್ಹತೆಯೇ ಮಾನದಂಡ ಎಂಬ ವಿಶ್ವಾಸವನ್ನು ಸರ್ಕಾರ ಮೂಡಿಸಬೇಕಿದೆ. ಯಾವ ಮುಲಾಜೂ ಇಲ್ಲದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಕರ್ನಾಟಕದ ನೇಮಕಾತಿ ಪರೀಕ್ಷೆಗಳು ಮಾದರಿಯಾಗಲಿವೆ.