

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ 2022-23ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದ್ದು, ಇದರ ಫಲಿತಾಂಶ, ಪ್ರಯೋಜನಗಳ ಬಗ್ಗೆ ತರಹೇವಾರಿ ಚರ್ಚೆಗಳು ನಡೆಯುತ್ತಿವೆ. ಎರಡು ವರ್ಷಗಳಿಂದ ಕಾಡುತ್ತಿರುವ ಕರೊನಾದಿಂದಾಗಿ ಆರ್ಥಿಕ ಸ್ಥಿತಿಗತಿ ಏರುಪೇರಾಗಿರುವುದು ಗೊತ್ತೇ ಇದೆ. ಹೀಗಾಗಿ ಸರ್ಕಾರದ ಲೆಕ್ಕಾಚಾರಗಳು ನಿರೀಕ್ಷೆಯಂತೆ ಸಾಗುತ್ತಿಲ್ಲ; ಘೋಷಿತ ಯೋಜನೆಗಳಿಗೆ ಸಹ ಹಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಣಕಾಸು ಸಚಿವರು ದೊಡ್ಡ ಮೊತ್ತದ ಹಣಕಾಸು ಬೇಡುವ ಯೋಜನೆಗಳನ್ನು ಪ್ರಕಟಿಸುವ ಗೋಜಿಗೆ ಹೋಗದೆ ಅಥವಾ ಜನಪ್ರಿಯ ಘೋಷಣೆಗಳ ಜಾಡು ಹಿಡಿಯದೆ ಸೀಮಿತ ಪರಿಧಿಯಲ್ಲಿ ಮುಂಗಡಪತ್ರ ರೂಪಿಸಿರುವುದು ಕಾಣುತ್ತದೆ.
‘ಭಾರತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದು, ಮುಂದಿನ 25 ವರ್ಷಗಳಲ್ಲಿ ದೇಶದ ಪ್ರಗತಿಗೆ ಬೇಕಾದ ನೀಲಿನಕ್ಷೆ ನಿಟ್ಟಿನಲ್ಲಿ ಈ ಬಜೆಟ್ನಲ್ಲಿ ಗಮನಹರಿಸಲಾಗಿದೆ (ಅಮೃತ ಕಾಲ)’ ಎಂದು ಸಚಿವೆ ತಿಳಿಸಿದ್ದಾರೆ. ಡಿಜಿಟಲ್ ಹೆಜ್ಜೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಈ ಮುಂತಾದ ರಂಗಗಳಿಗೆ ಆದ್ಯತೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಡಿಜಿಟಲ್ ಕರೆನ್ಸಿ ತರಲಾಗುತ್ತದೆಂದು ಈ ಹಿಂದೆಯೇ ಪ್ರಕಟಿಸಲಾಗಿದ್ದು, ಇದೀಗ ಬಜೆಟ್ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ಇದರಿಂದ ಡಿಜಿಟಲ್ ಆರ್ಥಿಕತೆಗೆ ವೇಗವರ್ಧಕ ದೊರಕಿದಂತಾಗುವುದೆಂದು ಭಾವಿಸಲಾಗಿದೆ. ಹಾಗೇ, ಕ್ರಿಪ್ಟೊ ಕರೆನ್ಸಿಗೆ ಶೇಕಡ 30 ತೆರಿಗೆ ಬಗ್ಗೆ ನಿರ್ಣಯ ಹೊರಬಿದ್ದಿದೆ. ವಿವಿಧ ಇಲಾಖೆಗಳನ್ನು ಏಕವೇದಿಕೆಯಡಿ ತಂದು ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ನೀಡುವ ‘ಪ್ರಧಾನಮಂತ್ರಿ ಗತಿಶಕ್ತಿ’ ಯೋಜನೆಗೆ ಒತ್ತು ನೀಡಲು ನಿರ್ಧರಿಸಿರುವುದು ಗಮನಾರ್ಹ.
ವೇತನವರ್ಗ ಸಾಮಾನ್ಯವಾಗಿ ಆದಾಯ ತೆರಿಗೆ ರಿಯಾಯಿತಿ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತದೆ. ಆದರೆ ಈ ಸಲ ಈ ಬಾಬ್ತಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ; ಹಳೆಯ ಸ್ಲ್ಯಾಬ್ ಅನ್ನೇ ಮುಂದುವರಿಸಲಾಗಿದೆ. ಆದರೆ ಹೊಸ ತೆರಿಗೆಗಳ ಪ್ರಸ್ತಾಪ ಇಲ್ಲದಿರುವುದು ಸ್ವಲ್ಪ ನಿರಾಳತೆ ತರುವಂಥದು. ಈ ಬಜೆಟ್ನಲ್ಲಿ 39 ಲಕ್ಷ ಕೋಟಿ ರೂ.ಗಳ ವಾರ್ಷಿಕ ವೆಚ್ಚ ಅಂದಾಜಿಸಿದ್ದು, ಆದಾಯ 22 ಲಕ್ಷ ಕೋಟಿ ರೂ. ಲೆಕ್ಕಿಸಲಾಗಿದೆ. ಅಂದರೆ ಭಾರಿ ಕೊರತೆ ಇದೆ. ಈ ಅಂತರ ತುಂಬಲು ಸಾಲ ಎತ್ತುವಳಿ, ಖಾಸಗಿ ಬಂಡವಾಳ ಕ್ರೋಡೀಕರಣ, ಸಾರ್ವಜನಿಕ-ಸರ್ಕಾರಿ ಸಹಭಾಗಿತ್ವ (ಪಿಪಿಪಿ); ಹೂಡಿಕೆ ಹಿಂಪಡೆತ; ಎಲ್ಐಸಿ ಷೇರು ವಿಕ್ರಯ ಮುಂತಾದ ಉಪಕ್ರಮಗಳನ್ನು ಯೋಜಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ವಿತ್ತ ಸಚಿವರು ಮಿತಿಗಳ ನಡುವೆ ಸಮತೋಲನ ಸಾಧಿಸುವ ಕಸರತ್ತನ್ನಂತೂ ನಡೆಸಿದ್ದಾರೆ; ಫಲಿತಾಂಶ ಕಾದುನೋಡಬೇಕು.