ತಂತ್ರಜ್ಞಾನದ ಮುನ್ನಡೆ: 5ಜಿಗೆ ಇಂದು ಚಾಲನೆ, ಇತಿಮಿತಿ ಬಳಕೆ ಅಗತ್ಯ

Editorial
Published on

ಪ್ರಧಾನಿ ನರೇಂದ್ರ ಮೋದಿ ಅವರು 5 ಜಿ ಸೇವೆಗಳಿಗೆ ಇಂದು ಚಾಲನೆ ನೀಡುತ್ತಿರುವುದು ಮೊಬೈಲ್​ಫೋನ್ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ. ಐದನೇ ಪೀಳಿಗೆ ಮೊಬೈಲ್​ಫೋನ್ ಜಾಲ ಈ ಮೂಲಕ ಭಾರತದಲ್ಲಿ ಬಳಕೆಗೆ ಬರಲಿದೆ. ಇದು ಸುಧಾರಿತ ತಂತ್ರಜ್ಞಾನವಾಗಿದ್ದು, 4ಜಿಗೆ ಹೋಲಿಸಿದರೆ ಹತ್ತಾರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ. 4 ಜಿ ಗರಿಷ್ಠ ವೇಗವು 1 ಜಿಬಿಪಿಎಸ್ (ಗಿಗಾ ಬೈಟ್ಸ್ ಪರ್ ಸೆಕೆಂಡ್) ಆಗಿದ್ದರೆ, 5 ಜಿ ಗರಿಷ್ಠ ವೇಗವು 20 ಜಿಬಿಪಿಎಸ್ ಇರಲಿದೆ.

ಹೀಗಾಗಿ, ಕ್ಷಣಾರ್ಧದಲ್ಲಿ ವಿಡಿಯೋ, ಫೋಟೋ ಸೇರಿದಂತೆ ದೊಡ್ಡ ಗಾತ್ರ ಫೈಲ್​ಗಳ ರವಾನೆಗೆ ಅವಕಾಶ ಲಭಿಸಿ ಡಿಜಿಟಲ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಕಾಣಲಿದೆ. 1980ರ ಸುಮಾರಿಗೆ ಜಾಗತಿಕವಾಗಿ ಬಳಕೆಗೆ ಬಂದ 1 ಜಿ ತಂತ್ರಜ್ಞಾನವು ಅನಲಾಗ್ ಧ್ವನಿಯನ್ನು ಒಳಗೊಂಡಿತ್ತು. ನಂತರ ಅಂದಾಜು ಪ್ರತಿ 10 ವರ್ಷಗಳಿಗೊಮ್ಮೆ ಸುಧಾರಿತ ತಂತ್ರಜ್ಞಾನವನ್ನು ಬಳಕೆಗೆ ತರಲಾಗಿದೆ. 1990ರ ಸುಮಾರಿಗೆ 2 ಜಿ ಮೂಲಕ ಡಿಜಿಟಲ್ ಧ್ವನಿ ತಂತ್ರಜ್ಞಾನ; 2000ರಲ್ಲಿ 3 ಜಿ ಮೂಲಕ ಕೇವಲ ಮಾತುಕತೆಯಲ್ಲದೆ, ಮೊಬೈಲ್ ಡಾಟಾ ರವಾನೆಗೂ ಅವಕಾಶ ದೊರೆಯಿತು. 2010ರ ಸುಮಾರಿಗೆ 4 ಜಿ ತಂತ್ರಜ್ಞಾನದ ಜಾಲ ವ್ಯಾಪಿಸುವ ಮೂಲಕ ಸ್ಮಾರ್ಟ್​ಫೋನ್ ಯುಗ ಆರಂಭವಾಯಿತು. ಮೊಬೈಲ್​ಫೋನ್ ಉಪಕರಣವು ಸಂಭಾಷಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದತ್ತಾಂಶ ಹಂಚಿಕೆಗೆ ಬಳಕೆಯಾಗತೊಡಗಿ, ಇಡೀ ವಿಶ್ವವೇ ಅಂಗೈ ಬೆರಳುಗಳಲ್ಲಿ ನೆಲೆ ನಿಲ್ಲುವಂತಾಯಿತು. ಫೇಸ್​ಬುಕ್, ವಾಟ್ಸ್ ಆಪ್, ಟ್ವೀಟರ್ ಮೊದಲಾದ ಸಾಮಾಜಿಕ ಜಾಲತಾಣಗಳ ಬಳಕೆಯಂತೂ ಕಲ್ಪನೆ ಮೀರಿದ ವೇಗದಲ್ಲಿ ಬೆಳೆಯಿತು.

ಭಾರತದಲ್ಲಿ 4 ಜಿ ಜಾಲಕ್ಕೆ ಚಾಲನೆ ದೊರೆತದ್ದು 2012ರ ಎಪ್ರಿಲ್ 10ರಂದು. ಇದಾದ ಸರಿಸುಮಾರು 10 ವರ್ಷಗಳ ನಂತರ 5ನೇ ಪೀಳಿಗೆಯ ಮೊಬೈಲ್​ಫೋನ್ ಜಾಲ ಲಭ್ಯವಾಗುತ್ತಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವು ನಡೆಸಿದ 5 ಜಿ ತರಂಗಾಂತರ ಹರಾಜಿನಲ್ಲಿ 1.5 ಲಕ್ಷ ಕೋಟಿ ರೂಪಾಯಿ ಮೊತ್ತ ಸಂಗ್ರಹವಾಗಿದೆ. ಹರಾಜಿಗಿಟ್ಟ 72 ಗಿಗಾ ಹರ್ಟ್ಜ್ ತರಂಗಾಂತರಗಳ ಪೈಕಿ 51.2ರಷ್ಟು ಗಿಗಾ ಹರ್ಟ್ಜ್ ತರಂಗಾಂತರಗಳನ್ನು ವಿವಿಧ ಕಂಪನಿಗಳು ಖರೀದಿಸಿವೆ. ಈಗಾಗಲೇ ಈ ತಂತ್ರಜ್ಞಾನಕ್ಕೆ ಅಗತ್ಯವಿರುವ ಫೋನ್​ಗಳು ಮಾರುಕಟ್ಟೆ ಪ್ರವೇಶಿಸಿ ಸಾಕಷ್ಟು ಜನರ ಕೈಸೇರಿದ್ದು, ಹೊಸ ತಂತ್ರಜ್ಞಾನ ಬಳಸಲು ಅವರೆಲ್ಲ ಕಾತರರಾಗಿದ್ದಾರೆ.

2023 ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲೆಡೆ 5ಜಿ ಸೇವೆ ಒದಗಿಸುವುದಾಗಿ ಜಿಯೋ ಹಾಗೂ ಏರ್​ಟೆಲ್ ಕಂಪನಿಗಳು ಪ್ರಕಟಿಸಿವೆ. ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸ್ವಾಗತಾರ್ಹವೇ. ಆದರೆ, ಮೊಬೈಲ್​ಫೋನ್​ನ ಮಿತಿಮೀರಿದ ಬಳಕೆಯಿಂದಾಗುವ ಸಾಧಕ-ಬಾಧಕಗಳತ್ತಲೂ ಗಮನ ನೀಡಬೇಕಾಗಿದೆ. ಕೆಲ ಮಕ್ಕಳು, ಯುವಕರು ಮೊಬೈಲ್ ದಾಸರಾಗಿದ್ದು, ಗೇಮ್ ಆಡುವ, ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದಾರೆ. ಮೊಬೈಲ್ ಹೊರಸೂಸುವ ವಿಕಿರಣವು ಅನಾರೋಗ್ಯಕ್ಕೆ ಕೂಡ ಕಾರಣವಾಗುತ್ತಿದ್ದು, ಇದರ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲವಾದರೂ ಇತಿ-ಮಿತಿಯಲ್ಲಿ ಉಪಯೋಗಿಸುವ ಬಗೆಗೆ ಜಾಗೃತಿ ಮೂಡಿಸುವ ಅಗತ್ಯ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net