

ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಎಸ್ಸಿಎಸ್ಪಿ/ ಟಿಎಸ್ಪಿ) ಯೋಜನೆಯ ಪ್ರಮುಖ ನಿಯಮವೆಂದರೆ ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಯೋಜನೆಗಳಿಗೆ ಬಳಸಿಕೊಳ್ಳಬಾರದು ಎಂಬುದು. ಆದರೆ, ಈ ಮಹತ್ವದ ನಿಯಮಗಳನ್ನು ಉಲ್ಲಂಘಿಸಿದ ಉದಾಹರಣೆಗಳಿಗೆ ಬರವಿಲ್ಲ.
ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ವಿಶೇಷ ಗಮನಹರಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಟ್ರೖೆಬಲ್ ಸಬ್ ಪ್ಲಾನ್ (ಟಿ.ಎಸ್.ಪಿ) ಅನ್ನು 1975ರಲ್ಲಿ ರೂಪಿಸಿತು. ನಂತರ ಪರಿಶಿಷ್ಟ ಜಾತಿಯವರ ಅಭಿವೃದ್ದಿಗಾಗಿ ವಿಶೇಷ ಘಟಕ ಯೋಜನೆಯನ್ನು (ಎಸ್.ಸಿ.ಪಿ) ಕೂಡ ಸಿದ್ಧಪಡಿಸಲಾಯಿತು. ಯೋಜನಾ ವೆಚ್ಚದಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗನುಗುಣವಾಗಿ ಅನುದಾನ ಮೀಸಲಿಡಬೇಕೆಂದು ಆಗ ಕೇಂದ್ರ ಯೋಜನಾ ಆಯೋಗವು ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಆಧಾರದಲ್ಲಿ ಬಜೆಟ್ ಹಂಚಿಕೆ ಮಾಡಲು ಕರ್ನಾಟಕದಲ್ಲಿ ಎಸ್ಸಿಎಸ್ಪಿ/ ಟಿಎಸ್ಪಿ ಅಧಿನಿಯಮ ಜಾರಿಗೆ ತರಲಾಯಿತು. ಸಮುದಾಯದವರನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮೇಲೆತ್ತುವ ಸದುದ್ದೇಶದಿಂದ ರೂಪಿಸಲಾದ ಈ ಯೋಜನೆ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬುದು ಅಧ್ಯಯನಯೋಗ್ಯ.
ಈ ಯೋಜನೆಗೆ ಪ್ರತಿ ಇಲಾಖೆಯು ಶೇ. 24.1 ಪ್ರಮಾಣದ ಆರ್ಥಿಕ ಅನುದಾನ ಮೀಸಲಿಡಬೇಕು. ಈ ಅನುದಾನವು ತಳಸಮುದಾಯದ ವ್ಯಕ್ತಿ/ಕುಟುಂಬಕ್ಕೆ ನೇರವಾಗಿ ತಲುಪಬೇಕು ಎಂದು ನಿಯಮದಲ್ಲಿ ಹೇಳಲಾಗಿದೆ. ಅಲ್ಲದೆ, ಯೋಜನೆ ರೂಪಿಸುವುದಕ್ಕೂ ಮೊದಲು ರಾಜ್ಯ ಮಟ್ಟದ ನೋಡಲ್ ಏಜೆನ್ಸಿಯು ಸಂಬಂಧಪಟ್ಟ ಸಮುದಾಯಗಳೊಂದಿಗೆ ಸಮಾಲೋಚಿಸಬೇಕು ಎಂದೂ ಹೇಳಲಾಗಿದೆ. ಆದರೆ, ಯೋಜನೆಗಳ ಮೇಲ್ವಿಚಾರಣೆಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ಸಮಿತಿಗಳನ್ನು ಸರಿಯಾಗಿ ರಚಿಸುತ್ತಿಲ್ಲ ಹಾಗೂ ಇವು ಕಾಲಕಾಲಕ್ಕೆ ಸಭೆಗಳನ್ನು ಕೂಡ ನಡೆಸುವುದಿಲ್ಲ ಎಂಬ ಆರೋಪಗಳಿವೆ. ಉಪಯೋಜನೆಯಡಿ ಅನುಷ್ಠಾನವಾಗುವ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ/ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂಬ ನಿಯಮವಿದ್ದರೂ ಇದನ್ನು ಗಂಭೀರವಾಗಿ ಪಾಲನೆ ಮಾಡಿಲ್ಲ ಎಂಬ ದೂರುಗಳಿವೆ.
ಈ ಯೋಜನೆ ಮೇಲ್ವಿಚಾರಣೆಗಾಗಿ ಲೋಕಪಾಲರನ್ನು ನೇಮಿಸಬೇಕು. ಎಸ್ಸಿಎಸ್ಪಿ/ಟಿಎಸ್ಪಿ ಹೆಸರಿನಲ್ಲಿ ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ತೆರೆಯಬೇಕು ಮತ್ತು ಈ ಖಾತೆಯನ್ನು ನೋಡಲ್ ಇಲಾಖೆಗಳು ನಿರ್ವಹಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ದಲಿತ ಸಂಘಟನೆಗಳು ಮುಂದಿಟ್ಟಿವೆ. ಪರಿಶಿಷ್ಟ ಸಮುದಾಯದ ಮುಖಂಡರೊಂದಿಗೆ ಸಮಾಲೋಚಿಸುವ ಮೂಲಕ ಸಫಲ ಅನುಷ್ಠಾನಕ್ಕಾಗಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಸೋಮವಾರ ಎಸ್ಸಿಎಸ್ಟಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 34 ಸಾವಿರ ಕೋಟಿ ರೂ. ಕ್ರಿಯಾ ಯೋಜನೆಗೆ ಸಮ್ಮತಿ ನೀಡಿದ್ದಾರೆ. ಹಣ ದುರ್ಬಳಕೆಯಾಗದಂತೆ, ಅನ್ಯ ಕಾರಣಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಹೊಣೆ ಎಂದೂ ಎಚ್ಚರಿಕೆ ನೀಡಿದ್ದಾರೆ. ಆದರೂ, ಸದ್ಯ ಐದು ಗ್ಯಾರಂಟಿಗಳನ್ನು ಈಡೇರಿಸುವ ಹೊಣೆ ಸರ್ಕಾರದ ಮೇಲಿರುವುದರಿಂದ ಈ ಅನುದಾನದಲ್ಲಿ 11 ಸಾವಿರ ಕೋಟಿ ರೂ. ಹಂಚಿಕೆ ಮಾಡುವ ಅನಿವಾರ್ಯ ಎದುರಾಗಿದೆ. ಐದು ಗ್ಯಾರಂಟಿಗಳ ಪ್ರಯೋಜನ ಪಡೆಯುವ ಎಸ್ಸಿ-ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ಈ ಅನುದಾನ ಸಿಗಲಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಒಟ್ಟಿನಲ್ಲಿ ಸದುದ್ದೇಶ ಉಲ್ಲಂಘನೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕಿದೆ.