ರೇಜರ್​​ಪೇ, ಪೇಟಿಎಂ ಸೇರಿ 6 ಕಂಪನಿಗಳ ಮೇಲೆ ಇ.ಡಿ. ದಾಳಿ; 17 ಕೋಟಿ ರೂ. ಜಪ್ತಿ..

ED
Published on

ಬೆಂಗಳೂರು: ಸಾರ್ವಜನಿಕರನ್ನು ನಂಬಿಸಿ, ಸಾಲ ಕೊಟ್ಟು ಕಿರುಕುಳ ನೀಡುತ್ತಿದ್ದ ಚೀನಾ ಮೂಲದ ಆ್ಯಪ್ ಸಂಸ್ಥೆಗಳಿಗೆ ಸೇರಿದ ಆರು ಕಡೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಸಂಸ್ಥೆಗಳಿಗೆ ಸೇರಿದ 17 ಕೋಟಿ ರೂ. ಜಪ್ತಿ ಮಾಡಿಕೊಂಡಿದ್ದಾರೆ.

ಸಾಲ ಕೊಟ್ಟು ಕಿರುಕುಳ ನೀಡುತ್ತಿದ್ದ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ವಹಿವಾಟು ಹಾಗೂ ಸಾರ್ವಜನಿಕರಿಗೆ ಕಿರುಕುಳ, ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ. ಅಕ್ರಮ ಲೇವಾದೇವಿ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು.

ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಶುಕ್ರವಾರ ನಗರದಲ್ಲಿರುವ ರೇಜರ್​​ಪೇ ಪ್ರೈವೇಟ್ ಲಿವಿಟೆಡ್, ಕ್ಯಾಶ್‌ಫ್ರೀ ಪೇಮೆಂಟ್ಸ್, ಪೇಟಿಎಂ ಪೇಮೆಂಟ್ ಸರ್ವೀಸ್ ಲಿಮಿಟೆಡ್ ಸೇರಿ ಆರು ಕಡೆಗಳಲ್ಲಿರುವ ಚೀನಾ ಮೂಲದ ಆ್ಯಪ್ ಕಂಪನಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಕಂಪನಿಗಳ ಬ್ಯಾಂಕ್ ಖಾತೆಯಲ್ಲಿದ್ದ 17 ಕೋಟಿ ರೂ. ಹಾಗೂ ಗ್ರಾಹಕರ ಐಡಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ಬಡ್ಡಿಯ ಆಮಿಷ: ಸ್ಥಳೀಯ ವ್ಯಕ್ತಿಗಳ ಹೆಸರಿನಲ್ಲಿ ನಡೆಯುತ್ತಿರುವ ಕಂಪನಿಗಳನ್ನು ಚೀನಾ ಮೂಲದ ವ್ಯಕ್ತಿ ನಿಯಂತ್ರಿಸುತ್ತಿದ್ದಾನೆ. ಸ್ಥಳೀಯ ವ್ಯಕ್ತಿಗಳಿಗೆ ಇಂತಿಷ್ಟು ಕಮಿಷನ್ ಕೊಡುವುದಾಗಿ ನಂಬಿಸಿ, ಅವರ ದಾಖಲೆಗಳನ್ನು ಪಡೆದು, ನಕಲಿ ನಿರ್ದೇಶಕರಾಗಿ ನೇಮಿಸುತ್ತಾರೆ. ಅವರ ಹೆಸರಿನಲ್ಲಿ ಕಂಪನಿಗಳನ್ನು ತೆರೆದು, ಸ್ಥಳೀಯ ವ್ಯಕ್ತಿಗಳಿಗೆ ಕಡಿಮೆ ಬಡ್ಡಿಗೆ ಕೆಲವು ನಿಮಿಷಗಳಲ್ಲೇ ಸಣ್ಣ ಪ್ರಮಾಣದ ಸಾಲ ಕೊಡುತ್ತಿದ್ದರು. ಸಾಲ ಪಡೆದ ಗ್ರಾಹಕರು ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿದರೂ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅಲ್ಲದೆ, ಗ್ರಾಹಕನ ಬಗ್ಗೆ ಸಾಮಾಜಿಕ ಜಾಲತಾಣದ ಮಾಹಿತಿ ಪಡೆದು, ಅವರ ಸ್ನೇಹಿತರು, ಸಂಬಂಧಿಕರು ಹಾಗೂ ಇತರರಿಗೆ ಕರೆ ಮಾಡಿ, ಸಾಲ ಮರುಪಾವತಿ ಬಗ್ಗೆ ದೂರು ನೀಡುತ್ತಿದ್ದರು. ಜತೆಗೆ ಗ್ರಾಹಕನ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು. ಜತೆಗೆ ನಕಲಿ ವಿಳಾಸಗಳನ್ನು ನೀಡಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ವಂಚಿಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net