ಬರ್ತ್​​ಡೇಗೆ ಕೇಕು-ಹೂಗುಚ್ಛ ಬೇಡ, 18 ಪದಗಳೇ ಸಾಕು: ಅಭಿಮಾನಿಗಳಲ್ಲಿ ವಿಶಿಷ್ಟ ಬೇಡಿಕೆ ಇಟ್ಟ ಉಪೇಂದ್ರ!

upendra
Published on

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಚಿತ್ರರಂಗದ ಸ್ಟಾರ್​ ನಟರು ತಮ್ಮ ಜನ್ಮದಿನದಂದು 'ಮನೆ ಹತ್ತಿರ ಬರಬೇಡಿ..' ಎಂದು ಅಭಿಮಾನಿಗಳಲ್ಲಿ ಕೋರಿಕೊಂಡಿದ್ದರು. ಅದಕ್ಕೆ ಕಾರಣ ಕರೊನಾ. ಅಲ್ಲದೆ ಸ್ಟಾರ್ ನಟರು ತಮ್ಮ ಜನ್ಮದಿನದಂದು ಪೋಟೋಗೆ ಹಾಲೆರೆಯಬೇಡಿ, ಕೇಕ್​-ಗುಚ್ಛ ತರಬೇಡಿ ಎಂದೂ ಈ ಹಿಂದೆ ಮನವಿ ಮಾಡಿಕೊಂಡಿದ್ದಿದೆ.

ಅಂಥದ್ದೇ ಒಂದು ಮನವಿಯನ್ನು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಮಾನಿಗಳಲ್ಲಿ ಮಾಡಿಕೊಂಡಿದ್ದಾರೆ. ಆದರೆ ಏನೇ ಮಾಡಿದರೂ ಡಿಫರೆಂಟ್ ಅನಿಸಿಕೊಂಡಿರುವ ಉಪೇಂದ್ರ, ಈ ಸಲ ತಮ್ಮ ಬರ್ತ್​ಡೇಗೆ ಅಭಿಮಾನಿಗಳ ಮುಂದೆ ವಿಶಿಷ್ಟ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅದರಲ್ಲೂ ಸೆ. 18ರಂದು ಹುಟ್ಟಿರುವ ಉಪ್ಪಿ, ಹದಿನೆಂಟರ ನಂಟಲ್ಲೇ ಅಭಿಮಾನಿಗಳೊಂದಿಗೆ ಬೆರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಜನ್ಮದಿನಕ್ಕೆ ಕೇಕ್​-ಹೂಗುಚ್ಛ ತರಬೇಡಿ ಎಂದು ಎಂದಿನಂತೆಯೇ ಕೋರಿಕೊಂಡಿರುವ ಅವರು ಈ ಸಲ ಹೊಸದೊಂದು ಮನವಿ ಮಾಡಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳ ಕೈಗೆ ಕೆಲಸ, ಬುದ್ಧಿಗೆ ಕಸರತ್ತು ಕೊಡುವ ಕಾರ್ಯ ಮಾಡಿದ್ದಾರೆ. ಜನ್ಮದಿನವಾದ ಸೆ. 18ರಂದು ಅಭಿಮಾನಿಗಳನ್ನು ತಮ್ಮ ಮನೆಯಲ್ಲೇ ಭೇಟಿ ಆಗುವುದಾಗಿ ಹೇಳಿರುವ ಅವರು, ಒಂದು ಹಾಳೆಯಲ್ಲಿ 18 ಪದಗಳಿಗೆ ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುವಂತೆ ಕೋರಿದ್ದಾರೆ. ಮಾತ್ರವಲ್ಲ, ಅತ್ಯುತ್ತಮವಾದ ಬರವಣಿಗೆಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net