

ನವದೆಹಲಿ: ಚುನಾವಣೆಗಾಗಿ ಭಾರಿ ಮೊತ್ತದ ಹಣದ ಹೊಳೆ ಹರಿಸುವುದು ಹೊಸದೇನಲ್ಲ. ಚುನಾವಣೆ ಖರ್ಚಿಗೆಂದೇ ಎಲ್ಲೆಲ್ಲಿಂದಲೋ ಹಣವನ್ನು ಹೊಂದಿಸಲಾಗುತ್ತದೆ. ಅದರಲ್ಲೂ ಇಲ್ಲೊಂದು ಕಡೆ ಬೆಟ್ಟಿಂಗ್ ಆ್ಯಪ್ನವರಿಂದ ಕೋಟಿಗಟ್ಟಲೆ ಹಣ ಮುಖ್ಯಮಂತ್ರಿಯೊಬ್ಬರು ಪಡೆದಿರುವುದು ಚುನಾವಣೆ ಆಸುಪಾಸಲ್ಲೇ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿರುವ ಮಹದೇವ ಬೆಟ್ಟಿಂಗ್ ಆ್ಯಪ್, ಛತ್ತೀಸ್ಗಢ ಮುಖ್ಯಮಂತ್ರಿಗೆ ಈ ವರೆಗೆ ಭಾರಿ ಮೊತ್ತದ ಹಣ ಸರಬರಾಜು ಮಾಡಿರುವುದು ಜಾರಿ ನಿರ್ದೇಶನಾಲಯದ ದಾಳಿಯಿಂದ ಬೆಳಕಿಗೆ ಬಂದಿದೆ.
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಮೋಟರ್ಸ್ ಕಡೆಯಿಂದ 508 ಕೋಟಿ ರೂ. ಸಂದಾಯ ಆಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದ್ದು, ತನಿಖೆ ನಡೆಯುತ್ತಿದೆ.
ನಿನ್ನೆ ಛತ್ತೀಸ್ಗಢದ ಹಲವೆಡೆ ದಾಳಿ ನಡೆಸಿ ತಪಾಸಣೆ ಮಾಡಿದ್ದ ಜಾರಿ ನಿರ್ದೇಶನಾಲಯ ಮಹದೇವ ಬೆಟ್ಟಿಂಗ್ ಆ್ಯಪ್ಗೆ ಸೇರಿದ್ದ 5.39 ಕೋಟಿ ರೂ. ನಗದು ವಶ ಪಡಿಸಿಕೊಂಡಿದ್ದು, ಬ್ಯಾಂಕ್ ಖಾತೆಯಲ್ಲಿರುವ 15.59 ಕೋಟಿ ರೂ. ಮುಟ್ಟುಗೋಲು ಹಾಕಿಕೊಂಡಿದೆ.