

ಬೆಂಗಳೂರು: ರಕ್ಷಣಾ ಇಲಾಖೆಯ ಭೂಮಿಯನ್ನು ಮೆಟ್ರೋಗೆ ನೀಡಿ ಭಾರಿ ಮೊತ್ತದ ಪರಿಹಾರ ಪಡೆದಿದ್ದ ಚರ್ಚ್ ಆಫ್ ಸೌತ್ ಇಂಡಿಯಾದ ಹಣವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ವಯ ಜಾರಿ ನಿರ್ದೇಶನಾಲಯವು ಸ್ಟೇಟ್ ಬ್ಯಾಂಕ್ ಇಂಡಿಯಾದ ಸುಧಾಮನಗರ ಶಾಖೆಯ ಚರ್ಚ್ ಆಫ್ ಸೌತ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್ ಖಾತೆಯಲ್ಲಿದ್ದ 59.52 ಕೋಟಿ ರೂ.ಗಳನ್ನು ಸ್ವಾಧೀನಕ್ಕೆ ಪಡೆಯಲು ಆದೇಶ ಹೊರಡಿಸಿದೆ. ಈ ಖಾತೆಯಲ್ಲಿ ಠೇವಣಿ ರೂಪದಲ್ಲಿ ಹಣವನ್ನು ಇರಿಸಲಾಗಿತ್ತು.
ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಬೆಂಗಳೂರಿನ ಆಲ್ ಸೇಂಟ್ಸ್ ಚರ್ಚ್ಗೆ ಧಾರ್ಮಿಕ ಉದ್ದೇಶಗಳಿಗಾಗಿ ನೀಡಲಾಗಿತ್ತು. ಆದರೆ, ಇದರ ಒಡೆತನ ರಕ್ಷಣಾ ಇಲಾಖೆಯ ಬಳಿಯೇ ಇತ್ತು. ಆದರೆ, ಈ ಪೈಕಿ 7,421.886 ಮೀಟರ್ ಜಾಗವನ್ನು ಚರ್ಚ್ ಆಫ್ ಸೌತ್ ಇಂಡಿಯಾ ಮೆಟ್ರೋಗೆ ಹಸ್ತಾಂತರಿಸಿತ್ತು. ಬದಲಿಗೆ ಪರಿಹಾರವಾಗಿ 59.52 ಲಕ್ಷ ರೂ.ಗಳನ್ನು ಪಡೆದಿತ್ತು. ಇದು ಅಕ್ರ ಎಂದು ಅಶೋಕ್ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.
ಪ್ರಕರಣದ ತನಿಖೆ ವೇಳೆ ಚರ್ಚ್ ಆಫ್ ಸೌತ್ ಇಂಡಿಯಾ ಭೂಮಿಯ ಒಡೆತನ ಹೊಂದಿಲ್ಲವೆಂದು ತಿಳಿದು ಬಂದಿತ್ತು. ಬದಲಿಗೆ ಧಾರ್ಮಿಕ ಕಾರ್ಯ ನಡೆಸಲಷ್ಟೇ ಭೂಮಿಯನ್ನು ನೀಡಲಾಗಿತ್ತು. ಹೀಗಾಗಿ ಭೂಮಿಯ ಒಡೆತನ ಹೊಂದಿದ ರಕ್ಷಣಾ ಇಲಾಖೆಗೆ ಪರಿಹಾರ ದೊರೆಯಬೇಕಿತ್ತು. ಹೀಗಾಗಿ ಪರಿಹಾರ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.