

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹರಿಯಾಣ ಕಾಂಗ್ರೆಸ್ ಶಾಸಕ ಸುರೇಂದ್ರ ಪನ್ವಾರ್ ಅವರನ್ನು ಶನಿವಾರ ಬಂಧಿಸಿದೆ. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ವಿಧಿಸಿರುವ ನಿಷೇಧದ ನಡುವೆಯೂ ಯಮುನಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಆತನ ಸಹಚರರು ಅಕ್ರಮವಾಗಿ ಗಣಿಕಾರಿಕೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂಡಿಯನ್ ನ್ಯಾಷನಲ್ ಲೋಕದಳದ (INLD) ಮಾಜಿ ಶಾಸಕ ದಿಲ್‌ಬಾಗ್ ಸಿಂಗ್ ಮತ್ತು ಆತನ ಸಹಚರನನ್ನು ವಶಕ್ಕೆ ಪಡೆದಿದೆ.
ಗಣಿಗಾರಿಕೆ ಪ್ರದೇಶಗಳಲ್ಲಿ ತೆರಿಗೆ ವಂಚನೆಯನ್ನು ತಡೆಗಟ್ಟಲು ಹರಿಯಾಣ ಸರ್ಕಾರವು 2020ರಲ್ಲಿ ಪರಿಚಯಿಸಿದ ಆನ್‌ಲೈನ್ ಪೋರ್ಟಲ್ ‘ಇ-ರಾವಣ’ ಯೋಜನೆಯಡಿ ದಾಖಲಾಗಿರುವ ವಂಚನೆ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಈ ವರ್ಷ ಜನವರಿಯಲ್ಲಿ ಕಾಂಗ್ರೆಸ್ ಶಾಸಕನ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಕಾಂಗ್ರೆಸ್ ಶಾಸಕನನ್ನು ಬಂಧಿಸಿದೆ.