ನೆರೆ ರಾಷ್ಟ್ರಗಳಿಗೆ ಆರ್ಥಿಕ ಬರೆ; ಹಣದುಬ್ಬರ ಸುಳಿಗೆ ಜನರ ಜೀವನ ತತ್ತರ, ಬೆಲೆ ಏರಿಕೆ ಬಿಸಿ..

Srilanka
Published on
ಕೋವಿಡ್ ಸಂಕಷ್ಟದ ನಂತರ ಭಾರತದ ನೆರೆಹೊರೆ ದೇಶಗಳಲ್ಲಿ ಒಂದಲ್ಲ ಒಂದು ರೀತಿಯ ಆರ್ಥಿಕ ಸಂಕಷ್ಟ, ಸಮಸ್ಯೆ, ಸವಾಲುಗಳು ಕಾಡುತ್ತಿವೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಇನ್ನೂ ಸಾಧ್ಯವಾಗಿಲ್ಲ. ಆರ್ಥಿಕ ಸಮಸ್ಯೆಯೂ ಕಾಡುತ್ತಿದೆ. ಶ್ರೀಲಂಕಾದಲ್ಲಿ ಹಣದುಬ್ಬರ ಪ್ರಮಾಣ ಮಿತಿ ಮೀರಿದ್ದು, ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ನೇಪಾಳದಲ್ಲೂ ಆರ್ಥಿಕ ಅಸ್ಥಿರತೆ ಗೋಚರಿಸಿದೆ. ಚೀನಾದಲ್ಲಿ ಹೊಸ ಕೋವಿಡ್ ಕೇಸ್ ತೀವ್ರಗೊಂಡಿದ್ದು ಮತ್ತೆ ಲಾಕ್​ಡೌನ್ ಘೋಷಣೆಯಾಗಿದೆ. ಇದು ಅರ್ಥವ್ಯವಸ್ಥೆಯನ್ನು ಬಾಧಿಸಿದೆ. ಈ ವಿದ್ಯಮಾನಗಳ ಕುರಿತ ನೋಟ ಇಲ್ಲಿದೆ.

ಕನಸಾಗಿ ಉಳಿದ ನಯಾ ಪಾಕ್

ಪಾಕಿಸ್ತಾನದಲ್ಲಿ ಮತ್ತೊಮ್ಮೆ ಪ್ರಧಾನಮಂತ್ರಿಯೊಬ್ಬರು ಐದು ವರ್ಷದ ಅವಧಿ ಮುಗಿಸುವ ಮುನ್ನವೇ ಪದಚ್ಯುತರಾಗಿದ್ದಾರೆ. ನಯಾ ಪಾಕಿಸ್ತಾನದ ಕನಸನ್ನು ಜನರ ಮನಸ್ಸಿನಲ್ಲಿ ಬಿತ್ತಿ 2018ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಇಮ್ರಾನ್ ಖಾನ್, ದೇಶದ ಅರ್ಥವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ವಿದೇಶಿ ಸಾಲ ಕತ್ತಿನ ಮಟ್ಟಕ್ಕೆ ಬಂದಿದೆ. ಇಮ್ರಾನ್ ಖಾನ್ ಸರ್ಕಾರ ಪತನವಾಗಿ, ಈಗ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಕಳೆದ ವಾರ, ಹಣದುಬ್ಬರ ಪ್ರಮಾಣ 2022ನೇ ಸಾಲಿನಲ್ಲಿ ಶೇಕಡ 11 ಎಂದು ಪರಿಷ್ಕರಿಸಿದೆ. ಏ.1ರ ಪ್ರಕಾರ, ವಿದೇಶಿ ಕರೆನ್ಸಿ ಮೀಸಲು ಕೂಡ 728 ದಶಲಕ್ಷ ಡಾಲರ್ ಕುಸಿದು 11.3 ಶತಕೋಟಿ ಡಾಲರ್ ಆಗಿದೆ. ಮಾರ್ಚ್ 4ರ ದತ್ತಾಂಶ ಪ್ರಕಾರ ಇದು 16.2 ಶತಕೋಟಿ ಡಾಲರ್ ಆಗಿತ್ತು.

ಶ್ರೀಲಂಕಾದ ವಿದೇಶಿ ಸಾಲ ಸುಸ್ತಿ: ಪಾಕಿಸ್ತಾನದಂತೆ ಶ್ರೀಲಂಕಾ ಕೂಡ ಬಹುದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದೆ. ಹಾಲು, ಅಕ್ಕಿ, ವಿದ್ಯುತ್, ಔಷಧ ಮುಂತಾದ ಮೂಲವಸ್ತುಗಳ ತೀವ್ರ ಕೊರತೆಯನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. 2019ರ ನವೆಂಬರ್ ಕೊನೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ರಾಜಪಕ್ಸ ಸರ್ಕಾರ, ಚುನಾವಣಾ ಪ್ರಣಾಳಿಕೆಯ ಘೋಷಣೆ ಪ್ರಕಾರ ತೆರಿಗೆಯನ್ನು ಕಡಿತಗೊಳಿಸಿತು. ಈ ನಡೆ, ಕೇಂದ್ರೀಯ ಬ್ಯಾಂಕ್ ಗಮನಕ್ಕೆ ತಾರದೆ ಮಾಡಿದ್ದರ ಪರಿಣಾಮ ಇಡೀ ಅರ್ಥವ್ಯವಸ್ಥೆ ಹದಗೆಟ್ಟಿತು. ವಿದೇಶಿ ಸಾಲದ ನಿರ್ವಹಣೆಯಲ್ಲೂ ಲಂಕಾ ಸರ್ಕಾರ ಎಡವಿತು. ಸಾರ್ವಜನಿಕ ಪ್ರತಿಭಟನೆಗಳು ವ್ಯಕ್ತವಾಗಿದ್ದು, 51 ಶತಕೋಟಿ ಡಾಲರ್ ವಿದೇಶಿ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಘೋಷಿಸಿತು. ಮಾರ್ಚ್ ಕೊನೆಗೆ ಶ್ರೀಲಂಕಾದ ವಿದೇಶಿ ಮೀಸಲು ನಿಧಿ 1.93 ಶತಕೋಟಿ ಡಾಲರ್ ಇತ್ತು. ಈ ವರ್ಷದ ಸಾಲಮರುಪಾವತಿ ಬಾಕಿ 400 ಕೋಟಿ ಡಾಲರ್ ಇದ್ದು, ಇದರಲ್ಲಿ ಜುಲೈನಲ್ಲಿ ಪಾವತಿಸಬೇಕಾದ 100 ಕೋಟಿ ಡಾಲರ್ ಕೂಡ ಸೇರಿದೆ.

ಚೀನಾದ 23 ನಗರ ಲಾಕ್​ಡೌನ್: ಜಗತ್ತನ್ನೇ ತಲ್ಲಣಗೊಳಿಸಿದ ಕರೊನಾ ವೈರಸ್​ನ ಮೂಲ ಚೀನಾದಲ್ಲಿ ಮತ್ತೊಂದು ಕೋವಿಡ್ ಸೋಂಕು ವ್ಯಾಪಿಸತೊಡಗಿದೆ. ಅಲ್ಲಿ ಈಗ 23 ನಗರಗಳಲ್ಲಿ ಪೂರ್ಣ ಅಥವಾ ಭಾಗಶಃ ಲಾಕ್​ಡೌನ್ ಚಾಲ್ತಿಯಲ್ಲಿದೆ. ಪರಿಣಾಮ 19.3 ಕೋಟಿ ಜನ ಮನೆಯಲ್ಲೇ ಉಳಿಯುವಂತಾಗಿದೆ. ಚೀನಾದ ಜಿಡಿಪಿಗೆ ಇವರ ಕೊಡುಗೆ ಶೇಕಡ 22. ಈ ಲಾಕ್​ಡೌನ್ ಪರಿಸ್ಥಿತಿ ಚೀನಾದ ರಫ್ತು ಸಾಮರ್ಥ್ಯದ ಮೇಲೆ ಹೊಡೆತ ನೀಡಲಿದೆ. ಇದರ ಪರಿಣಾಮ ಚೀನಾ ಅಷ್ಟೇ ಅಲ್ಲ ಜಗತ್ತನ್ನೂ ಬಾಧಿಸಲಿದೆ ಎಂದು ಚೀನಾದ ಯುರೋಪಿಯನ್ ಯೂನಿಯನ್ ಚೇಂಬರ್ ಆಫ್ ಕಾಮರ್ಸ್ ಎಚ್ಚರಿಸಿದೆ.

ಭಾರತಕ್ಕೆ ಹಣದುಬ್ಬರ ಆಘಾತ: ಭಾರತದಲ್ಲಿ ಮಾರ್ಚ್ ತಿಂಗಳ ಹಣದುಬ್ಬರ ಪ್ರಮಾಣ 17 ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಭಾರತದ ವಿದೇಶಿ ಮೀಸಲು ನಿಧಿ ಕೂಡ ಏ.8ರ ಡೇಟಾ ಪ್ರಕಾರ, 11.173 ಶತಕೋಟಿ ಡಾಲರ್ ಕುಸಿದು 606.475 ಶತಕೋಟಿ ಡಾಲರ್​ಗೆ ತಲುಪಿದೆ. ವಾರದ ಅವಧಿಯಲ್ಲಿ ಅತ್ಯಧಿಕ ಕುಸಿತ ಮಾರ್ಚ್ 11ಕ್ಕೆ ಕೊನೆಗೊಂಡ ವಾರದಲ್ಲಿ 9.6 ಶತಕೋಟಿ ಡಾಲರ್ ಕುಸಿತ ದಾಖಲಾಗಿತ್ತು. ಆದಾಗ್ಯೂ, ಭಾರತದ ಅರ್ಥವ್ಯವಸ್ಥೆ ಉಳಿದವುಗಳಿಗಿಂತ ವೇಗವಾಗಿ ಚೇತರಿಸಿಕೊಳ್ಳುವ ಗುಣಲಕ್ಷಣ ದಟ್ಟವಾಗಿದೆ ಎನ್ನುತ್ತಾರೆ ಪರಿಣತರು.

ನೇಪಾಳದಲ್ಲಿ ಆಮದು ಬಿಗಿ: ಪಾಕಿಸ್ತಾನ, ಶ್ರೀಲಂಕಾಗಳಂತೆ ನೇಪಾಳ ಕೂಡ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕರೋನಾ ಸಂಕಷ್ಟದ ಕಾರಣ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದ ಕಾರಣ ನೇಪಾಳದ ಆದಾಯ ಮೂಲ ಕಳೆಗುಂದಿದೆ. ಆದ್ದರಿಂದ ವಿದೇಶಿ ಮೀಸಲು ನಿಧಿ ಕುಸಿತ ಕಂಡಿದೆ. ಈ ನಿಟ್ಟಿನಲ್ಲಿ ಗಮನ ಹರಿಸಿರುವ ನೇಪಾಳ ರಾಷ್ಟ್ರ ಬ್ಯಾಂಕ್, ದೇಶಕ್ಕೆ ಅಗತ್ಯವಸ್ತುಗಳ ಹೊರತಾದ ವಸ್ತುಗಳ (ಕಾರು, ಚಿನ್ನ ಮತ್ತು ಕಾಸ್ಮೆಟಿಕ್ಸ್, ಐಷಾರಾಮಿ ವಸ್ತುಗಳು) ಆಮದುಗಳ ಮೇಲೆ ನಿರ್ಬಂಧ ಹೇರಬೇಕು. ಹೀಗೆ ಮಾಡುವುದರಿಂದ ವಿದೇಸಿ ಮೀಸಲು ನಿಧಿ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ. ನೇಪಾಳದ ವಿದೇಶಿ ಮೀಸಲು ನಿಧಿ 2021ರ ಜುಲೈ ಮಧ್ಯಭಾಗದಲ್ಲಿ 11.75 ಶತಕೋಟಿ ಡಾಲರ್ ಇದ್ದದ್ದು, ಈ ವರ್ಷ ಫೆಬ್ರವರಿಗೆ 9.75 ಶತಕೋಟಿ ಡಾಲರ್​ಗೆ ಕುಸಿದಿದೆ. ಆಮದು ಬಿಲ್ ಶೇಕಡ 38.6 ಏರಿ 10.8 ಶತಕೋಟಿ ಡಾಲರ್​ಗೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net