ಮತ್ತೆ ಬಿಡುಗಡೆ ಆಗಲಿದೆ ಅಪ್ಪು ಅಭಿನಯದ ಕೊನೇ ಚಿತ್ರ ಜೇಮ್ಸ್​; ಕಾರಣವಿದು...

James 1
Published on

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಪುನಃ ಬಿಡುಗಡೆ ಆಗಲಿದೆ. ಹಾಗೆ ಈ ಚಿತ್ರವನ್ನು ರಿ-ರಿಲೀಸ್ ಮಾಡುವುದಕ್ಕೂ ಬಲವಾದ ಕಾರಣವೊಂದಿದೆ. ಈ ಮೂಲಕ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಜೇಮ್ಸ್ ಸಿನಿಮಾದ ಹೊಸ ಅನುಭವ ದಕ್ಕಲಿದೆ.

ಜೇಮ್ಸ್ ಸಿನಿಮಾ ಮರು ಬಿಡುಗಡೆ ಕುರಿತು ನಿರ್ದೇಶಕ ಚೇತನ್​ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಮರು ಬಿಡುಗಡೆ ಆಗಲಿರುವ ಜೇಮ್ಸ್​ನಲ್ಲಿ ಅಪ್ಪು ಪಾತ್ರಕ್ಕೆ ಪೂರ್ತಿಯಾಗಿ ಪುನೀತ್ ಅವರದ್ದೇ ದನಿ ಇರಲಿದೆ ಎಂಬುದಾಗಿ ಚೇತನ್ ತಿಳಿಸಿದ್ದಾರೆ.

ಹೈದರಬಾದ್​ನ ಇಂಜಿನಿಯರ್ ಪಪ್ಪು ಎಂಬವರ ಕೈಚಳಕದಲ್ಲಿ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಧ್ವನಿ ಮೂಡಿ ಬರುವಂತೆ ಮಾಡಲಾಗಿದೆ. ಕಳೆದ 3 ವರ್ಷಗಳಿಂದ ಬೇರೆ ಬೇರೆ ಧ್ವನಿಗಳನ್ನು ರಿಸರ್ಚ್ ಮಾಡುತ್ತಿದ್ದ ಪಪ್ಪು ಟೀಮ್ ಇದನ್ನು ಮಾಡಿದೆ. ಪುನೀತ್ ಸಂದರ್ಶನಗಳ ಸಿನಿಮಾಗಳ ಕ್ಲಿಪ್ಸ್ ನೋಡಿ ಟೆಕ್ನಾಲಜಿ ಅಳವಡಿಸಿ ಅಪ್ಪು ಧ್ವನಿಯೇ ಕೇಳಿಸುವಂತೆ ಮಾಡಲಾಗಿದೆ. ಈ ರೀತಿಯಾಗಿ ಧ್ವನಿ ಅಳವಡಿಕೆ ಪ್ರಪಂಚದಲ್ಲೇ ಇದು ಮೊದಲ ಪ್ರಯತ್ನ ಎನ್ನಬಹುದು ಎಂದಿದ್ದಾರೆ ಚೇತನ್.

ಅಪ್ಪು ಅವರ ಪಾತ್ರಕ್ಕೆ ಅವರದ್ದೇ ಧ್ವನಿ ನೀಡಲು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಅದು ಆ ಸಮಯದಲ್ಲಿ ಸಾಧ್ಯವಾಗಲಿಲ್ಲ. ಚಿತ್ರಕ್ಕೆ ಡಬ್ಬಿಂಗ್ ಮುಗಿದ ನಂತರ ನಟ ಶ್ರೀಕಾಂತ್ ಅವರು ಈ ತಂತ್ರಜ್ಞರ ಬಗ್ಗೆ ಹೇಳಿದರು. ಅವರಿಗೆ ನಮ್ಮ ಚಿತ್ರದ ದೃಶ್ಯಗಳನ್ನು, ಅಪ್ಪು ಅವರ ಬೇರೆ ಬೇರೆ ಧ್ವನಿ ತುಣುಕು ಕಳುಹಿಸಿ ಕೊಟ್ಟೆವು. ಕೊನೆಗೊಂದು ದಿನ ಜೇಮ್ಸ್ ಪಾತ್ರಕ್ಕೆ ಅವರದ್ದೇ ವಾಯ್ಸ್ ಸಿಂಕ್ ಮಾಡಿ ತೋರಿಸಿದರು, ನೋಡಿ ಖುಷಿ ಆಯ್ತು. ಶುಕ್ರವಾರದಿಂದ ಹೊಸ ಅನುಭವ ಕೊಡುವಂತೆ ಜೇಮ್ಸ್ ಪುನಃ ಬಿಡುಗಡೆ ಆಗಲಿದೆ ಎಂದು ಚೇತನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net