25 ವರ್ಷಗಳ ಹಿಂದೆ 59 ಜನರನ್ನು ಬಲಿ ಪಡೆದಿದ್ದ ಕಟ್ಟಡದಲ್ಲಿ ಮತ್ತೆ ಬೆಂಕಿ; ಕಾರಣ ನಿಗೂಢ..

Upahar
Published on

ನವದೆಹಲಿ: ಇಪ್ಪತ್ತೈದು ವರ್ಷಗಳ ಹಿಂದೆ 59 ಜನರನ್ನು ಬಲಿ ಪಡೆದಿದ್ದ ಅದೇ ಜಾಗದಲ್ಲಿ ಇಂದು ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕಾಣಿಸಲು ಕಾರಣ ಏನು ಎಂಬುದಿನ್ನೂ ಖಚಿತವಾಗಿ ತಿಳಿದುಬಂದಿಲ್ಲ.

ದೆಹಲಿಯ ಗ್ರೀನ್​ಪಾರ್ಕ್​ನಲ್ಲಿರುವ ಚಿತ್ರಮಂದಿರ ಉಪಹಾರ್ ಸಿನಿಮಾದಲ್ಲಿ 1997ರ ಜೂನ್​ 13ರ ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಾರ್ಡರ್ ಸಿನಿಮಾ ಪ್ರದರ್ಶನ ಆಗುತ್ತಿದ್ದ ಸಮಯದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಈ ಅವಘಡದಲ್ಲಿ 59 ಮಂದಿ ಬೆಂಕಿಗೆ ಸಿಲುಕಿ ಹಾಗೂ ಉಸಿರುಗಟ್ಟಿ ಸಾವಿಗೀಡಾದರೆ, 103 ಮಂದಿ ಹೊರಬರಲು ಉಂಟಾದ ನೂಕುನುಗ್ಗಲು ಹಾಗೂ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡಿದ್ದರು.

ಇಂದು ಬೆಳಗಿನ ಜಾವ ಅದೇ ಚಿತ್ರಮಂದಿರದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿನ ಬಾಲ್ಕನಿ ಮತ್ತು ಮಹಡಿಯಲ್ಲಿ ಬೆಂಕಿ ಉಂಟಾಗಿತ್ತು. ಕಾರ್ಯಾಚರಣೆಗೆ 9 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಿಸಿ ನಂದಿಸಲಾಯಿತು. 1997ರಿಂದಲೂ ಮುಚ್ಚಿಯೇ ಇದ್ದ ಈ ಚಿತ್ರಮಂದಿರಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಮಾಹಿತಿ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net