ಅಡಕೆ ಜತೆಗೆ ಉಪ ಕೃಷಿಯಿಂದ ಆರ್ಥಿಕಾಭಿವೃದ್ಧಿ

27 nrp 8
ಎನ್.ಆರ್.ಪುರ ತಾಲೂಕು ಮಲ್ಲಂದೂರು ಗ್ರಾಮದಲ್ಲಿ ಆಯೋಜಿಸಿದ್ದ ಸಮಗ್ರ ತೋಟಗಾರಿಕಾ ಬೆಳೆಗಳ ಮಾಹಿತಿ ಕಾರ್ಯಕ್ರಮವನ್ನು ಕೃಷಿ ಮೇಲ್ವಿಚಾರಕ ದಿನೇಶ್ ಉದ್ಘಾಟಿಸಿದರು. ರೇಖಾ, ನವೀನ, ಸುಧೀರ್, ಅಶೋಕ, ಚೇತನ್, ಕೃಷ್ಣಮೂರ್ತಿ ಇದ್ದರು.
Published on

ಎನ್.ಆರ್.ಪುರ: ರೈತರು ಅಡಕೆ ಬೆಳೆಯಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದರ ಜತೆಗೆ ಇನ್ನಿತರ ತೋಟಗಾರಿಕೆ ಬೆಳೆ, ಹೈನುಗಾರಿಕೆ, ಜೇನು ಕೃಷಿ, ಗೋಬರ್ ಗ್ಯಾಸ್ ಅಳವಡಿಸಿಕೊಂಡಲ್ಲಿ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ದಿನೇಶ್ ತಿಳಿಸಿದರು.

ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಡೆದ ಸಮಗ್ರ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಅಧ್ಯಯನ ಪ್ರವಾಸಕ್ಕೆ ಧರ್ಮಸ್ಥಳ ಯೋಜನೆಯಿಂದ ಅನುದಾನ ನೀಡಲಾಗುತ್ತಿದೆ. ಯೋಜನೆಯಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು. ಪ್ರತಿ ವರ್ಷ ವಿವಿಧ ಕೃಷಿ ತರಬೇತಿ ಅಧ್ಯಯನ ಪ್ರವಾಸಕ್ಕೆ ಅನುದಾನ ನೀಡಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ತೋಟಗಾರಿಕೆ ಇಲಾಖೆ ಅಧಿಕಾರಿ ನವೀನ ಮಾತನಾಡಿ, ಅಡಕೆ, ಕಾಳುಮೆಣಸು, ಜಾಯಿಕಾಯಿ, ಲವಂಗ, ಏಲಕ್ಕಿ ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಬೆಳೆದರೆ ಸಹಾಯ ಧನ ಸಿಗುತ್ತದೆ. ಜೇನು ಪೆಟ್ಟಿಗೆಗಳನ್ನು ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಸದಸ್ಯರು ಇಲಾಖೆಗೆ ಬಂದು ಹೆಸರು ನೋಂದಣಿ ಮಾಡಿಕೊಳ್ಳಬೇಕು ಹಾಗೂ ಟ್ರೈಕೋಡರ್ಮ ಸುಡೊಮಾನಸ್ ಗೊಬ್ಬರಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಎಲೆಚುಕ್ಕೆ ರೋಗ ಬಾಧಿತ ಅಡಕೆ ತೋಟಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸುವಾಗ ಗರಿಗಳಿಗೂ ಸಿಂಪಡಿಸಿದರೆ ನಿಯಂತ್ರಣಕ್ಕೆ ಬರುತ್ತದೆ. ಬೋರ್ಡೋ ದ್ರಾವಣವನ್ನು 7 ಪಿ.ಎಚ್ ಬರುವ ಹಾಗೆ ತಯಾರಿ ಮಾಡಿಕೊಳ್ಳಬೇಕು. ಕಾಳು ಮೆಣಸು ಬಳ್ಳಿಗಳಿಗೆ ಹೆಚ್ಚು ರಸಗೊಬ್ಬರ ನೀಡಬಾರದು. ಅಲ್ಲದೆ ಅಡಕೆ ಬಿಟ್ಟು ಬೇರೆ ಗಿಡಗಳಿಗೆ ಹಬ್ಬಿಸಿದರೆ ಉತ್ತಮ ಎಂದು ಸಲಹೆ ನೀಡಿದರು.
ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ ಮಾತನಾಡಿ, ಮಲೆನಾಡಿನಲ್ಲಿ ಎಲೆಚುಕ್ಕೆ ಹಾಗೂ ಹಳದಿ ಎಲೆ ರೋಗ ವ್ಯಾಪಕವಾಗಿದೆ. ಎನ್.ಆರ್.ಪುರ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಇದೆ. ಎಲ್ಲ ರೈತರು ಮುನ್ನೆಚ್ಚರಿಕೆ ವಹಿಸಿದರೆ ರೋಗ ತಡೆಗಟ್ಟಬಹುದು ಎಂದರು.
ಧರ್ಮಸ್ಥಳ ಯೋಜನೆ ವಲಯ ಮೇಲ್ವಿಚಾರಕ ಸುಧೀರ್, ಒಕ್ಕೂಟದ ಅಧ್ಯಕ್ಷ ಅಶೋಕ, ಹೊಡಿಯಾಲ ಒಕ್ಕೂಟದ ಅಧ್ಯಕ್ಷ ಚೇತನ್, ಮಂಜುನಾಥ, ಸೇವಾ ಪ್ರತಿನಿಧಿ ಕೃಷ್ಣಮೂರ್ತಿ, ಶ್ರೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net