

ಕ್ಯಾಲಿಫೋರ್ನಿಯ: ಆನ್ಲೈನ್ ಷಾಪಿಂಗ್ ವೆಬ್ಸೈಟ್ಗಳ ಮೂಲಕ ವಸ್ತುಗಳನ್ನು ಖರೀದಿ ಮಾಡಿದಾಗ, ಸಹಜವಾಗಿ ವಿಮರ್ಶೆಗಳನ್ನು (ರಿವ್ಯೂ) ಬರೆಯುವಂತೆ ಅಲ್ಲಿ ಕೇಳಲಾಗುತ್ತದೆ, ಇಲ್ಲವೇ ಸ್ಟಾರ್ಗಳನ್ನು ಹಾಕುವಂತೆ ಸೂಚಿಸಲಾಗುತ್ತದೆ.
ಹಾಗೆಂದು ಪ್ರತಿಸಲವೂ ಒಳ್ಳೆಯ ವಿಮರ್ಶೆಯನ್ನೇ ಹಾಕಬೇಕು ಎಂದರೆ ಹೇಗೆ? ಕೆಟ್ಟ ವಿಮರ್ಶೆ ಬರೆದ ಕಾರಣ, ಇಲ್ಲಿನ ದಂಪತಿ ಷಾಪಿಂಗ್ ತಾಣದಿಂದ ಇನ್ನಿಲ್ಲದ ಕಿರುಕುಳ ಬಂದಿದೆ.
ಇಂಥ ಕಿರುಕುಳ ನೀಡುತ್ತಿರುವ ಆರೋಪ ಹೊತ್ತ ಆನ್ಲೈನ್ ಷಾಪಿಂಗ್ ತಾಣ ಇ-ಬೇ. ಆನ್ಲೈನ್ ಪತ್ರಿಕೆಯ ಸಂಪಾದಕ ಹಾಗೂ ಪಬ್ಲಿಷರ್ ದಂಪತಿ ಇ-ಬೇ ವಿರುದ್ಧ ಇದೀಗ ದೂರು ದಾಖಲಿಸಿದ್ದು, ಕಂಪನಿಯ ಆರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಇ-ಬೇ ತಾಣದಿಂದ ಕೆಲವೊಂದು ವಸ್ತುಗಳನ್ನು ಖರೀದಿಸಿದ್ದ ದಂಪತಿಗೆ ಅದರ ಸೇವೆ ಸರಿಯಾಗಿ ಇಲ್ಲ ಎಂದು ಎನಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪತ್ರಿಕೆಯಲ್ಲಿ ಈ ಕಂಪನಿ ವಿರುದ್ಧ ವಿಮರ್ಶೆ ಬರೆದಿದ್ದಾರೆ. ಇ-ಬೇ ಕಂಪನಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಗ್ರಾಹಕರಿಗೆ ಸರಿಯಾದ ಸೇವೆ ಒದಗಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಸಿಡಿದೆದ್ದಿರುವ ಕಂಪೆನಿ ಇವರ ಜೀವಂತ ಜೇಡಗಳು ಹಾಗೂ ಜಿರಲೆಗಳನ್ನು ಕಳಿಸುತ್ತಿದೆ. ಸಾಲದು ಎಂಬುದಕ್ಕೆ ರಕ್ತಭರಿತ ಹಂದಿಯನ್ನು ಹೋಲು ಮಾಸ್ಕ್ಗಳು, ಅಶ್ಲೀಲ ಸಾಹಿತ್ಯಗಳು, ಶವಸಂಸ್ಕಾರದ ವಸ್ತುಗಳು ಕೂಡ ಇವರ ಮನೆಗೆ ಬಂದಿವೆ.ಅಷ್ಟೇ ಅಲ್ಲದೇ, ದಂಪತಿಯ ಕಾರಿನಲ್ಲಿ ಜಿಪಿಎಸ್ ಸಾಧನವನ್ನೂ ಅಳವಡಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ದಂಪತಿ ದೂರು ದಾಖಲು ಮಾಡಿದ್ದಾರೆ. ಕಂಪನಿಯ ಹಿರಿಯ ನಿದೇರ್ಶಕನನ್ನೂ ಸೇರಿದಂತೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)