

ನವದೆಹಲಿ: ದೇಶಾದ್ಯಂತ ಲಾಕ್ಡೌನ್ ಘೋಷಣೆಗೂ ಮುನ್ನ ಕರ್ನಾಟಕದ ವಿಧಾನ ಮಂಡಲ ಕಲಾಪದಲ್ಲಿ 'ಅಲ್ಕೋಹಾಲ್ ಕುಡಿದರೆ ಕರೊನಾ ನಿವಾರಣೆಯಾಗುತ್ತೆ' ಎಂಬ ಬಗ್ಗೆ ಭಾರಿ ಚರ್ಚೆಗಳಾಗಿದ್ದವು. ಈಗ ಇಂಥದ್ದೇ ಚರ್ಚೆ ಪಾಕಿಸ್ತಾನದ ಸಂಸತ್ನಲ್ಲೂ ಚರ್ಚೆಯಾಗಿ ಭಾರಿ ವೈರಲ್ ಆಗಿದೆ. ಆದರೆ, ಅಲ್ಲಿ ಅಲ್ಕೋಹಾಲ್ ಬದಲು ಮಿಡತೆ ಬಗ್ಗೆ ಚರ್ಚೆ ನಡೆದಿದೆ.
ಮಿಡತೆ ತಿಂದರೆ ಕರೊನಾ ಗುಣವಾಗುತ್ತೆ. ಕರೊನಾ ಇಲ್ಲದವರೂ ಮಿಡತೆ ತಿಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ಪಾಕಿಸ್ತಾನದ ಸಂಸದ ರಿಯಾಜ್ ಪಠ್ಯಾಣಾ ವಾದವಾಗಿದೆ. ಈ ವಾದವನ್ನವರು ವೈಯಕ್ತಿಕವಾಗಿ ಮಾಡಿಲ್ಲ. ಅತ್ಯಂತ ಗಂಭೀರ ವಿಷಯಗಳು ಚರ್ಚೆಯಾಗುವ ಸಂಸತ್ ಸದನದಲ್ಲಿಯೇ ಮಾಡಿದ್ದಾರೆ.
ಕಲಾಪದಲ್ಲಿ ಮಾತನಾಡಿದ ರಿಯಾಜ್, ಮಿಡತೆ ತಿಂದರೆ ಕರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಇದನ್ನು ಪಾಕಿಸ್ತಾನದ ಜನರು ತಿನ್ನುವುದರಿಂದ ಎರಡು ಲಾಭಗಳಿವೆ. ಒಂದು ಕರೊನಾವನ್ನು ದೂರವಿಡಬಹುದು ಹಾಗೂ ದೇಶವನ್ನು ಆಗಾಗ ಕಾಡುವ ಮಿಡತೆಗಳ ಹಾವಳಿಗೂ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ.
ಇದಷ್ಟೇ ಅಲ್ಲ, ಈ ವಿಚಾರವಾಗಿ ಸಂಶೋಧನೆ ನಡೆಸಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಒತ್ತಾಯ ಮಾಡಬೇಕೆಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ಮತ್ತೊಬ್ಬ ಸಂಸದ ನಾವು ಮಲಗಿದ್ದರೆ ಕರೊನಾ ಕೂಡ ಮಲಗಿರುತ್ತೆ. ನಮಗೆ ತೊಂದರೆ ಕೊಡುವುದಿಲ್ಲ ಎಂಬ ಸಲಹೆ ನೀಡಿದ್ದ. ಕೆಲವರು ಮಿಡತೆ ಪಾಕಿಸ್ತಾನದ ಆಹಾರವಾಗಬಹುದು ಎಂದು ಕಾಲೆಳೆದಿದ್ದರೆ, ಸಂಸತ್ ನಮ್ಮ ಮನರಂಜನೆಗೆ ಎಂದೂ ಮೋಸ ಮಾಡಲ್ಲ ಎಂದಿದ್ದಾರೆ.