ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರು?: ಉತ್ತರಕರ್ನಾಟಕದಲ್ಲಿ ತಾಪಮಾನ ಹೆಚ್ಚಳ ಈ ವರ್ಷ ಬೇಸಿಗೆ ಅವಧಿ 4 ತಿಂಗಳು

Summer
Published on

| ಹರೀಶ್ ಬೇಲೂರು ಬೆಂಗಳೂರು

ನವೆಂಬರ್​ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಈ ವರ್ಷ ಚಳಿಗಾಲದ ಅವಧಿ ಇಳಿಮುಖವಾಗಿದ್ದು, ವಾಡಿಕೆಗೂ ಮುನ್ನವೇ ರಾಜ್ಯದಲ್ಲಿ ಬೇಸಿಗೆ ಶುರುವಾಗಲಿದೆ. ಅಲ್ಲದೆ, ಸಾಮಾನ್ಯವಾಗಿ 3 ತಿಂಗಳು ಇರುತ್ತಿದ್ದ ಬೇಸಿಗೆ ಈ ವರ್ಷ 4 ತಿಂಗಳು ಇರಲಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಫೆಬ್ರವರಿ 2ನೇ ವಾರದಿಂದಲೇ ಬೇಸಿಗೆ ಪ್ರಾರಂಭವಾಗಲಿದ್ದು, ಜೂ.15ರವರೆಗೆ ಇರಲಿದೆ. ಏಪ್ರಿಲ್ 2ನೇ ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲೇ ಅಧಿಕವಾಗಲಿದೆ. ಮಾರ್ಚ್ 4ನೇ ವಾರದಲ್ಲಿ ಅಥವಾ ಅದಕ್ಕಿಂತ ಮುನ್ನವೇ ಬೇಸಿಗೆ ಮಳೆ ಆರ್ಭಟವೂ ಶುರುವಾಗುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕ ಕೊತಕೊತ: ಕಲಬುರಗಿ, ಬೀದರ್, ವಿಜಯಪುರ, ರಾಯಚೂರು ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ. ಆದರೆ, ಈ ಬಾರಿ ಅದು 45-46 ಡಿಗ್ರಿವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸರಾಸರಿ ತಾಪಮಾನ 1-2 ಡಿಗ್ರಿ ಏರಿಯಾಗುವ ಸಾಧ್ಯತೆಯೂ ಇದೆ.

ಇಳಿಕೆಗೆ ಕಾರಣವೇನು?: ಸಾಮಾನ್ಯ ವರ್ಷಕ್ಕಿಂತ ಈ ವರ್ಷ ತುಸು ಭಿನ್ನವಾಗಿದೆ. ವಾತಾವರಣ ಉಷ್ಣಾಂಶದ ಇಳಿಕೆಯ ಅವಧಿ ಸಾಮಾನ್ಯ ವರ್ಷಗಳಲ್ಲಿ 40-45 ದಿನಗಳು ಇರುತ್ತದೆ. ಆದರೆ, ಈ ಬಾರಿ 16 ದಿನಗಳು ಮಾತ್ರ ಇತ್ತು. ಈ ಹಿನ್ನೆಲೆಯಲ್ಲಿ ಚಳಿ ತೀವ್ರತೆ ಗರಿಷ್ಠ ಮಟ್ಟಕ್ಕೂ ತಲುಪಲಿಲ್ಲ. ಹಿಂಗಾರು ಮಳೆ ಧಾರಾಕಾರವಾಗಿ ಸುರಿದ ಪರಿಣಾಮದಿಂದ ಚಳಿಗಾಲ ಆರಂಭ 15-20 ದಿನಗಳು ಮುಂದೂಡಿಕೆಯಾಗಿತು. ಇದರಿಂದ ವಾತಾವರಣದ ಉಷ್ಣಾಂಶ ಇಳಿಕೆಯ ಆರಂಭ ದಿನಗಳು ಮುಂದೂಡಿಕೆಯಾಗಿತ್ತು.

ಪೂರ್ವ ಸಿದ್ಧತೆಗೆ ತಯಾರಾಗಿ: ಈ ವರ್ಷ ಉತ್ತಮ ಮಳೆಯಿಂದಾಗಿ ರಾಜ್ಯದ ಡ್ಯಾಂಗಳು, ನದಿಗಳು ಹಾಗೂ ಕೆರೆ- ಕುಂಟೆಗಳಲ್ಲಿ ಯಥೇಚ್ಛವಾಗಿ ನೀರು ಸಂಗ್ರಹವಾಗಿದೆ. ಆದರೆ, ಈ ವರ್ಷದಲ್ಲಿ ದೀರ್ಘ ಅವಧಿವರೆಗೆ ಬೇಸಿಗೆ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಾಡಾಯಿಸಲಿದೆ. ಆದ್ದರಿಂದ, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಇಲ್ಲದಿದ್ದರೆ, ಜನರು ಪರದಾಡಬೇಕಾಗುತ್ತದೆ.

ಹವಾಮಾನ ವೈಪರೀತ್ಯದಿಂದಾಗಿ ಚಳಿಗಾಲ ಅವಧಿ ಇಳಿಮುಖಗೊಂಡರೆ ಬೇಸಿಗೆ ಅವಧಿಯು ಏರಿಕೆಯಾಗಿದೆ. ಈ ವರ್ಷ 4 ತಿಂಗಳು ಬೇಸಿಗೆ ಇರಲಿದೆ. ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರುವಾಗುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರು ಸಮಸ್ಯೆ ಸೇರಿ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಉಷ್ಣಾಂಶ ಹೆಚ್ಚಾದಂತೆ ಮಳೆಯೂ ಸುರಿಯಲಿದೆ. | ಡಾ.ಎಂ.ಬಿ.ರಾಜೇಗೌಡ ಹವಾಮಾನ ವೈಪರಿತ್ಯ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net