

ಪಿರಿಯಾಪಟ್ಟಣ: ಅಸಂಘಟಿತ ಕಾರ್ಮಿಕ ವಲಯದಲ್ಲಿರುವ ಪತ್ರಿಕಾ ವಿತರಕರಿಗೆ ಇ-ಶ್ರಮ್ ಯೋಜನೆ ಉಪಯುಕ್ತವಾಗಿದೆ ಎಂದು ಕಾರ್ಮಿಕ ನಿರೀಕ್ಷಕ ಎನ್.ಮಂಜುನಾಥ್ ತಿಳಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯಡಿ ಇ-ಶ್ರಮ್ ಕಾರ್ಡ್ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಸಂಘಟಿತ ವಲಯದಲ್ಲಿರುವ ಪತ್ರಿಕಾ ವಿತರಕರು ಪತ್ರಿಕೆ ವಿತರಿಸಲು ಬೈಸಿಕಲ್ ಮತ್ತು ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ಮುಂಜಾನೆ ಮತ್ತು ಮುಸ್ಸಂಜೆ ವೇಳೆಯಲ್ಲಿ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
18ರಿಂದ 59 ವರ್ಷದೊಳಗಿನ ಇಎಸ್‌ಐ, ಇಪಿಎಫ್ ಸೌಲಭ್ಯ ಹೊಂದಿರದ ಮತ್ತು ಆದಾಯ ತೆರಿಗೆ ಪಾವತಿದಾರರಾಗಿರದ ಎಲ್ಲರೂ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಗೆ ಒಳಪಟ್ಟಿರುವ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅವರ ವಾರಸುದಾರರಿಗೆ 2 ಲಕ್ಷ ರೂ.ಪರಿಹಾರ, ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂ.ಹಾಗೂ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚದ ಮರು ಪಾವತಿಯಾಗಿ 1ಲಕ್ಷ ರೂ.ಗಳವರೆಗೆ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದ ಅವರು, ಇ-ಶ್ರಮ್ ಪೋರ್ಟಲ್ ಮೂಲಕವೂ ಸ್ವಯಂ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸತೀಶ್ ಆರಾಧ್ಯ ಮಾತನಾಡಿ, ಮಳೆ, ಬಿಸಿಲು, ಚಳಿ ಎನ್ನದೆ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರಿಗೆ, ಪತ್ರಿಕೆ ಹಂಚುವ ಹುಡುಗರಿಗೆ ನೈತಿಕ ಸ್ಥೈರ್ಯ ತುಂಬುವಲ್ಲಿ ವಿಜಯವಾಣಿ ಪತ್ರಿಕೆ ಮತ್ತು ಕಾರ್ಮಿಕ ಇಲಾಖೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಪಿ.ಡಿ.ಪ್ರಸನ್ನ, ಸಿ.ಎನ್.ವಿಜಯ್, ಕಾರ್ಮಿಕ ಇಲಾಖೆ ಡಿಇಒಗಳಾದ ಚಂದ್ರಕಾಂತ್, ವಿಜಯಕುಮಾರ್, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕುಮಾರ್, ಭಾರತೀಯ ಮಜ್ದೂರ್ ಸಂಘದ ತಾಲೂಕು ಅಧ್ಯಕ್ಷ ಮನು ಮತ್ತಿತರರು ಉಪಸ್ಥಿತರಿದ್ದರು.