

ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕೃಷಿ ಕ್ಷೇತ್ರದಲ್ಲಿ ರೈತರು ನಿತ್ಯ ಎದುರಿಸುವ ಹತ್ತಾರು ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ನೀಡುವ ಹಾಗೂ ಈ ವಲಯದಲ್ಲಿ ಸಣ್ಣ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೂ ಅವಕಾಶ ಮಾಡಿಕೊಡುವ ಇ-ಸ್ಯಾಪ್ ಆಪ್ ರಾಜ್ಯಾದ್ಯಂತ ಅನುಷ್ಠಾನಕ್ಕೆ ಸಜ್ಜಾಗಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗ ರೂಪಿಸಿರುವ ಇ-ಸ್ಯಾಪ್ (ಇ-ಸಲ್ಯೂಷನ್ಸ್ ಅಗೆನೆಸ್ಟ್ ಅಗ್ರಿಕಲ್ಚರ್ ಫೆಸ್ಟ್) ತಂತ್ರಾಂಶವನ್ನು ಕೃಷಿ ಇಲಾಖೆ ಬಳಕೆ ಮಾಡಿಕೊಳ್ಳುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳಿಗೆ ಸಂಬಂಧಿಸಿದಂತೆ ಕೃಷಿಕರು ಎದುರಿಸುವ ಕೀಟಬಾಧೆ, ರೋಗ, ಪೋಷಕಾಂಶ ನಿರ್ವಹಣೆಯ ಕುರಿತು ತಂತ್ರಜ್ಞಾನದ ಮೂಲಕ ನಿಖರವಾದ ಸಲಹೆ ನೀಡಲಾಗುತ್ತದೆ. ಈಗ ಯಾವುದೇ ಬೆಳೆ ಕೀಟಬಾಧೆ ಅಥವಾ ರೋಗದಿಂದ ಹಾನಿಗೆ ಒಳಗಾದ ನಂತರ ಅದರ ಪೋಸ್ಟ್ ಮಾರ್ಟಂ ಮಾಡಲಾಗುತ್ತಿದೆ. ಅಂತಹ ವ್ಯವಸ್ಥೆಗೆ ಕಡಿವಾಣ ಹಾಕಿ ಹಾನಿಯಾಗುವುದಕ್ಕೆ ಮೊದಲೇ ಪರಿಹಾರ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಬೇಸಾಯ ಸಂಬಂಧಿತ ಸಮಸ್ಯೆಗಳಿಂದ ಇಳುವರಿ ಕುಸಿಯುವುದರಿಂದ ಆರ್ಥಿಕ ನಷ್ಟವಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಆಪ್ನಲ್ಲಿ ರೈತರ ಸಮಸ್ಯೆಗಳನ್ನು ಅಪ್ಲೋಡ್ ಮಾಡಿ ತಾಂತ್ರಿಕ ಪರಿಹಾರ ನೀಡುವ ಮೂಲಕ ನಷ್ಟ ತಡೆಯಲು ಸರ್ಕಾರ ಕ್ರಮವಹಿಸಲಿದೆ.
ಕೃಷಿ ವೃತ್ತಿಗಾರರ ನೇಮಕ: ಇ-ಸ್ಯಾಪ್ ಆಪ್ ಮೂಲಕ ಸಣ್ಣ ಪ್ರಮಾಣದಲ್ಲಿ ಉದ್ಯೋಗದ ಸೃಷ್ಟಿಗೂ ಅವಕಾಶ ನೀಡಲಾಗುತ್ತದೆ. ಕೃಷಿ ಪದವೀಧರರು, ಡಿಪ್ಲೊಮಾ ಪಡೆದವರಿಗೆ ಈ ಆಪ್ ಬಳಕೆ ಮಾಡಲು ಅನುಮತಿ ನೀಡಲಾಗುತ್ತದೆ. ಅಲ್ಲದೇ ಕೃಷಿ ಪರಿಕರ ವಿತರಕರು ಹಾಗೂ ಮಾರಾಟಗಾರರು ಅನುಮತಿ ಪಡೆಯಬಹುದು. ಅವರನ್ನು ನೋಂದಾಯಿತ ಕೃಷಿ ವೃತ್ತಿಗಾರರು ಎಂದು ಕರೆಯಲಾಗುತ್ತದೆ. ಎಷ್ಟು ಜನರನ್ನು ನೇಮಕ ಮಾಡಬೇಕೆಂಬುದಕ್ಕೆ ಗುರಿಯೇನು ಇಲ್ಲ. ಅವರು ರೈತರಿಂದ ಸೇವಾ ಶುಲ್ಕ ಪಡೆಯಬಹುದು. ಸೇವಾ ಶುಲ್ಕ ಎಷ್ಟು ಇರಬೇಕು ಎಂಬುದನ್ನು ನಿರ್ಧಾರ ಮಾಡಲು ಕೃಷಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.
ಸಾರ್ವಜನಿಕವಾಗಿ ಆಪ್ ಸಿಗಲ್ಲ: ಇ-ಸ್ಯಾಪ್ ಆಪ್ ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ಇಲಾಖೆ ಹಾಗೂ ಕೃಷಿ ವೃತ್ತಿಗಾರರಿಗೆ ಮಾತ್ರ ಲಭ್ಯವಾಗುತ್ತದೆ. ಸಾರ್ವಜನಿಕವಾಗಿ ಸಿಕ್ಕರೆ ದುರುಪಯೋಗ ಆಗುವ ಸಾಧ್ಯತೆಗಳಿರುವುದರಿಂದ ಈ ರೀತಿಯಲ್ಲಿ ಕಟ್ಟುಪಾಡುಗಳಿವೆ.
ಬರಲಿದೆ ಇನ್ನೊಂದು ಆಪ್: ಇ-ಸ್ಯಾಪ್ನ ಮುಂದುವರೆದ ಭಾಗವಾಗಿ ಇ-ಸ್ಯಾಪ್ ಎಕ್ಸ್ಪರ್ಟ್ ಆಪ್ ಸಹ ಶೀಘ್ರದಲ್ಲಿಯೇ ರಾಯಚೂರು ಕೃಷಿ ವಿವಿ ಕೀಟಶಾಸ್ತ್ರ ವಿಭಾಗ ರೂಪಿಸುತ್ತಿದೆ. ಇದರಲ್ಲಿ ಇನ್ನಷ್ಟು ಸುಧಾರಿತ ಅಂಶಗಳಿರುತ್ತವೆ. ತಜ್ಞರ ಸಲಹೆಗಳನ್ನು ಬಳಸಲಾಗುತ್ತದೆ.
ವಿವಿಯಲ್ಲಿ ಯಶಸ್ವಿ: ರಾಯಚೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಈ ಆಫ್ ಯಶಸ್ವಿಯಾಗಿದೆ. 2012 ರಲ್ಲಿಯೇ ಇದನ್ನು ತಯಾರಿಸಲಾಗಿದೆ. ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ನೆರವು ನೀಡಿದೆ. 2017 ರಲ್ಲಿಯೇ ರಾಜ್ಯ ಸರ್ಕಾರ ಇದರ ಬಳಕೆಗೆ ನಿರ್ಧಾರ ಮಾಡಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿಯೇ ಆಪ್ ಬಳಕೆ ಸಂಬಂಧ ಪ್ರಸ್ತಾಪ ಮಾಡಿದ್ದಾರೆ. ಕೃಷಿ ಇಲಾಖೆ ಸಹ ಪ್ರಾಯೋಗಕವಾಗಿ ಬಳಕೆ ಮಾಡಿದ್ದು ಸುಮಾರು 60 ಸಾವಿರ ರೈತರಿಗೆ ಸಲಹೆಗಳನ್ನು ನೀಡಿದೆ. ರಾಜ್ಯಾದ್ಯಂತ ವಿಸ್ತರಣೆಯಾದರೆ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.
ಎಷ್ಟು ಬೆಳೆಗಳ ಮಾಹಿತಿ ಲಭ್ಯ?: ಈ ಆಪ್ನಲ್ಲಿ 49 ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ, ಸಲಹೆ ಸಿಗಲಿದೆ. ಕೃಷಿ ವಿಜ್ಞಾನಿಗಳು ಭೂಮಿಯ ಕಡೆ ಸುಳಿಯಲ್ಲ ಎಂಬ ಆರೋಪಗಳಿವೆ. ಆದರೆ ಆಪ್ನಲ್ಲಿ ರೈತರ ಸಮಸ್ಯೆಗಳ ಬಗ್ಗೆ ತಾಂತ್ರಿಕ ತಜ್ಞರು ವಿಜ್ಞಾನಿಗಳನ್ನು ಸಂರ್ಪಸಿಯೂ ಪರಿಹಾರ ನೀಡಲಾಗುತ್ತದೆ. ಕೀಟ ತಜ್ಞ, ರೋಗ ತಜ್ಞ ಹಾಗೂ ಬೇಸಾಯ ತಜ್ಞರಿಂದ ಮಾಹಿತಿ ಸಿಗಲಿದೆ. ರೈತ ಸಂಪರ್ಕ ಕೇಂದ್ರಗಳನ್ನು ಹಾಗೂ ರಾಜ್ಯದಲ್ಲಿರುವ 224 ಸಂಚಾರಿ ಸಸ್ಯ ಪ್ರಯೋಗಾಲಯಗಳಿಗೂ ಈ ಆಪ್ ಬಳಸಲು ಅನುಮತಿ ನೀಡಲಾಗುತ್ತದೆ. ಅದರಿಂದಲೂ ರೈತರು ಎದುರಿಸುವ ಸಮಸ್ಯೆಗಳಿಗೆ ನೆರವಾಗಲಿದೆ. ಸಲಹೆ ನೀಡುವುದು ಮಾತ್ರವಲ್ಲ, ಯಾವ ರೈತರಿಗೆ ಏನು ಸಲಹೆ ನೀಡಲಾಗಿದೆ ಎಂಬ ಬಗ್ಗೆಯೂ ಇಲಾಖೆಗೆ ವರದಿ ಬರಲಿದೆ.
₹2 ಕೋಟಿ ವೆಚ್ಚ: ಇ-ಸ್ಯಾಪ್ ಆಪ್ನ್ನು ರಾಜ್ಯಾದ್ಯಂತ ಬಳಕೆ ಮಾಡಲು 2 ಕೋಟಿ ರೂ.ಗಳನ್ನು ಕೃಷಿ ಇಲಾಖೆ ವೆಚ್ಚ ಮಾಡುತ್ತಿದೆ.
ಬೆಳೆಗಳಿಗೆ ಕೀಟಬಾಧೆ, ರೋಗ, ಪೋಷಕಾಂಶ ಕೊರತೆಯಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಇದನ್ನು ಆರಂಭದಲ್ಲಿಯೇ ಕಂಡು ಹಿಡಿದು ಸೂಕ್ತ ಪರಿಹಾರ ಕಲ್ಪಿಸಿದರೆ ಅನುಕೂಲವಾಗಲಿದೆ. ಆದ್ದರಿಂದ ಇ-ಸ್ಯಾಪ್ ಬಳಕೆಗೆ ಮುಂದಾಗಿದ್ದೇವೆ. ಕೃಷಿ ವೃತ್ತಿಗಾರರನ್ನು ನೇಮಕ ಮಾಡುವುದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.
| ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಇದರ ಬಳಕೆ ಸಮರ್ಥವಾಗಿ ಆಗಿದೆ. ಈ ಆಪ್ನ ನೆರವು ಪಡೆದ ರೈತರಿಗೆ ಹಾನಿ ತಪ್ಪಿದೆ. ಸರ್ಕಾರ ಎಲ್ಲೆಡೆ ಈ ಆಪ್ ಬಳಸುವುದರಿಂದ ರಾಜ್ಯದ ರೈತರಿಗೆ ಅನುಕೂಲವಾಗಲಿದೆ.
| ಡಾ. ಪ್ರಭುರಾಜ್ ಮುಖ್ಯಸ್ಥ, ಕೀಟಶಾಸ್ತ್ರ ವಿಭಾಗ, ರಾಯಚೂರು ಕೃಷಿ ವಿವಿ