ಇ-ಕಾಮರ್ಸ್ ಕಂಪನಿ, ಗ್ರಾಹಕರಿಗೆ ವಂಚನೆ; ಅಂತಾರಾಜ್ಯದ 21 ಸೈಬರ್ ಕಳ್ಳರ ಸೆರೆ

E commerce
Published on

ಬೆಂಗಳೂರು: ಇ-ಕಾಮರ್ಸ್‌ನಲ್ಲಿ ಗ್ರಾಹಕರ ಡೇಟಾ ಕದ್ದು ನಕಲಿ ವಸ್ತುಗಳನ್ನು ಕಳುಹಿಸಿ ಮೋಸ ಮಾಡುತ್ತಿದ್ದ ಅಂತಾರಾಜ್ಯದ 21 ಆರೋಪಿಗಳನ್ನು ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್, ಮಧ್ಯಪ್ರದೇಶ ಮತ್ತು ಮುಂಬೈ ಮೂಲದ 21 ಆರೋಪಿಗಳು ಬಂಧಿತರು. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಮತ್ತು 19.45 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ. ಇ-ಕಾಮರ್ಸ್ ಆ್ಯಪ್‌ಗಳಾದ ಫ್ಲಿಪ್ ಕಾರ್ಟ್, ಅಮೆಜಾನ್, ಮಿಶೋಗಳಲ್ಲಿ ಆರ್ಡರ್ ಮಾಡುತ್ತಿದ್ದ ಡೇಟಾ ಕದ್ದು ಆರೋಪಿಗಳು ದುರ್ಬಳಕೆ ಮಾಡಿದ್ದರು. ಕ್ಯಾಷ್ ಆನ್ ಡೆಲಿವರಿ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ನಕಲಿ ವಸ್ತುಗಳನ್ನ ಕೊಟ್ಟು ಕಂಪನಿಗೆ ಮತ್ತು ಗ್ರಾಹಕರಿಗೆ ಮೋಸ ಮಾಡುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಶಿವ ಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

2021ರಿಂದ ಇ-ಕಾಮರ್ಸ್ ಕಂಪನಿ ಮತ್ತು ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಗ್ಯಾಂಗ್, ಮಿಶೋ ಬಳಸುವ ಗ್ರಾಹಕರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಬಂಧಿತರ ಪೈಕಿ ಕೆಲವರು ಮಿಶೋದಲ್ಲಿ ಕೆಲಸ ಮಾಡಿ ಬಿಟ್ಟಿದ್ದರು. ಮಿಶೋ ಕಂಪನಿಯಲ್ಲಿ ಆರ್ಡರ್ ಮಾಡುವ ಗ್ರಾಹಕರ ಡೇಟಾಗಳನ್ನು ಕಳವು ಮಾಡಿ, ಅದನ್ನು ಇತರ ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದರು.

ಇದಾದ ಮೇಲೆ ಮುಂಬೈ ಮೂಲದ ಆರೋಪಿಗಳು ಕ್ಯಾಶ್ ಆ್ಯಂಡ್ ಡೆಲವರಿ ಆರ್ಡರ್ ಮಾಡುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಬುಕ್ಕಿಂಗ್ ಮಾಡಿದ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನು ನಿಂಬೂಸ್ ಪೊಸ್ಟ್, ಎಕ್ಸ್‌ಪ್ರೇಸ್‌ಬಿ, ಷಡೋಪಾಕ್ಸ್, ಬ್ಲೂಡಾರ್ಟ್, ಓನ್‌ಡೇ ಕೋರಿಯರ್ ಹಾಗೂ ಇತರೆ ಕೋರಿಯರ್ ಸರ್ವಿಸ್‌ಗಳನ್ನು ಕಳುಹಿಸುತ್ತಿದ್ದರು.

ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ವಸ್ತುಗಳ ಆರ್ಡರ್ ಮಾಡಿದ ಎರಡ್ಮೂರು ದಿನಗಳ ಬಳಿಕ ಗ್ರಾಹಕರ ಕೈಗೆ ವಸ್ತುಗಳು ಸೇರುತ್ತವೆ. ಆದರೆ, ಆರೋಪಿಗಳು ಅದಕ್ಕೂ ಮೊದಲೇ ಗ್ರಾಹಕರಿಗೆ ಕೋರಿಯರ್ ಮೂಲಕ ವಸ್ತುಗಳನ್ನು ಕಳುಹಿಸಿ ನಗದು ಪಡೆಯುತ್ತಿದ್ದರು.

ಇದು ಕೋರಿಯರ್ ಸಂಸ್ಥೆಗಳಿಗೂ ಗೊತ್ತಿರಲಿಲ್ಲ. ಹೀಗಾಗಿ ಕೋರಿಯರ್ ಸಂಸ್ಥೆಗಳು ಬ್ಯಾಂಕ್ ಖಾತೆ ಮೂಲಕವೇ ಆರೋಪಿಗಳ ಖಾತೆಗೆ ಹಣ ಜಮೆ ಮಾಡುತ್ತಿದ್ದರು. ಇದಾದ ಮೇಲೆ ಇ-ಕಾಮರ್ಸ್ ಕಂಪನಿಯಿಂದ ನೈಜ ವಸ್ತುಗಳು ಗ್ರಾಹಕರ ಬಳಿ ಬಂದಾಗ, ಕೆಲವರು ನಕಲಿ ವಸ್ತುಗಳನ್ನು ಇ-ಕಾರ್ಮಸ್ ಪೋರ್ಟಲ್ ಮೂಲಕವೇ ವಾಪಸ್ ಕಳುಹಿಸಿ, ಹಣ ವಾಪಸ್ ಪಡೆಯುತ್ತಿದ್ದರು.

ಕೆಲವರು ನೈಜ ವಸ್ತುಗಳನ್ನು ಪಡೆದು, ಈಗಾಗಲೇ ಹಣ ಪಾವತಿ ಮಾಡಲಾಗಿದೆ ಎಂದು ಡೆಲಿವರಿ ಬಾಯ್‌ಗಳಿಗೆ ದಬಾಯಿಸಿ ಕಳುಹಿಸುತ್ತಿದ್ದರು. ಇ-ಕಾಮರ್ಸ್ ಕಂಪನಿ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದ್ದರಿಂದ ಕಡಿಮೆ ಮೊತ್ತದ ನಷ್ಟಕ್ಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ದೂರುದಾರ ಕಂಪನಿಗೆ 70 ಲಕ್ಷ ರೂ. ವಂಚನೆ ಆಗಿರುವುದು ಬೆಳಕಿಗೆ ಬಂದಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ವಿಭಾಗ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ತನಿಖೆ ಕೈಗೊಂಡ ಕಾತ್ಯಾಯನಿ ಆಳ್ವ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net