

ನೆರೆಹೊರೆಯವರು ಪರಸ್ಪರ ಗೌರವಿಸಬೇಕು. ಯಾರೂ ಯಾರಿಗೂ ಕಿರುಕುಳ ನೀಡಬಾರದು. ಪ್ರೀತಿ, ವಿಶ್ವಾಸದಿಂದ ವರ್ತಿಸಬೇಕು. ಇಲ್ಲಿ ಶ್ರೀಮಂತಿಕೆ, ಬಡತನ, ಆಸ್ತಿ-ಅಂತಸ್ತು ಎಂಬ ಭೇದ-ಭಾವ ಇರಬಾರದು. ನೆರೆಹೊರೆಯವರು ಸಂತೋಷವಾಗಿಲ್ಲ, ಸುರಕ್ಷಿತವಾಗಿಲ್ಲ ಎಂದರೆ ಅವರಲ್ಲಿ ಧರ್ಮವಿಶ್ವಾಸ ವಿಲ್ಲ ಎಂದು ತಿಳಿಯಬೇಕು. ಅಲ್ಲಾಹನಲ್ಲಿ ವಿಶ್ವಾಸವಿರಿಸುವವನು ಒಳ್ಳೆಯದನ್ನು ಮಾತನಾಡಲಿ, ಇಲ್ಲವಾದರೆ ಮೌನವಾಗಿರಲಿ, ತಮ್ಮ ನೆರೆ-ಹೊರೆಯವರನ್ನು ಗೌರವಿಸಲಿ, ಪ್ರೀತಿಸಲಿ. ತನ್ನ ಅತಿಥಿಗಳನ್ನು ಗೌರವಿಸಲಿ ಎಂದು ಪ್ರವಾದಿ ಮುಹಮ್ಮದ್(ಸ) ಹೇಳುತ್ತಾರೆ. ಪರಸ್ಪರ ಸಹಕಾರದಿಂದ ಕೂಡಿದ ಸೌಹಾರ್ದಯುತ ಜೀವನಕ್ಕೆ ಇಸ್ಲಾಂ ನೀಡುವ ಪ್ರಾಧ್ಯಾನ್ಯತೆಯನ್ನು ಬಹು ಶಕ್ತಿಯುತವಾಗಿ ಈ ಹದೀಸ್(ವಚನ) ಪ್ರಸ್ತುತಪಡಿಸುತ್ತದೆ.
ನೆರೆಹೊರೆಯವರು ಪ್ರೀತಿ-ವಿಶ್ವಾಸ, ಸಹಕಾರ, ಸೌಹಾರ್ದ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ, ಸಹಕಾರಗಳು ನೆಲೆಗೊಳ್ಳುತ್ತವೆ. ನೆರೆಹೊರೆಯವರೊಂದಿಗೆ ಕೋಪ ದ್ವೇಷದಿಂದ ಇರುವುದೆಂದರೆ ನಿತ್ಯ ಜೀವನದಲ್ಲಿ ಭೇಟಿಯಾಗುವ, ಪರಸ್ಪರ ಸಮೀಪ ಸೇರಿ ಜೀವಿಸುವ ಜನರ ನಡುವೆ ಇರುವ ದ್ವೇಷ ಮತ್ತು ಕ್ರೋಧದ ಭಾವನೆ ಎಂದರ್ಥ. ಈ ಬಗೆಯ ಜನರಿಂದ ತುಂಬಿದ ಸಮಾಜದಲ್ಲಿ ಎಂದೂ ಶಾಂತಿ, ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ. ಒಬ್ಬರನ್ನು ನೋಡಿ ಮತ್ತೊಬ್ಬರು ಉರಿದೇಳಬಾರದು. ಆ ಜಾತಿ, ಈ ಜಾತಿಯ ಜನ ಎಂಬ ಭೇದ-ಭಾವ ಸಲ್ಲದು.
ಯಾರ ಉಪಟಳದಿಂದ ಅವನ ನೆರೆ-ಹೊರೆಯವರು ನಿರ್ಭೀತವಾಗಿರುವುದಿಲ್ಲವೋ ಅವನು, ಸ್ವರ್ಗವನ್ನು ಪ್ರವೇಶಿಸಲಾರನು. ಯಾರಾದರೂ ಅಲ್ಲಾಹನು ಮತ್ತು ಅಂತಿಮದಿನದ ಮೇಲೆ ವಿಶ್ವಾಸವಿರಿಸುತ್ತಾನೆ ಎಂದಾದರೆ ಆತ ನೆರೆ-ಹೊರೆಯವರನ್ನು ಗೌರವಿಸಬೇಕು. ಇಲ್ಲದಿದ್ದರೆ ದೇವವಿಶ್ವಾಸ ನಿಷ್ಪಲಗೊಳ್ಳುತ್ತವೆ. ನೆರೆಹೊರೆಯವರ ಹಕ್ಕುಗಳ ಬಗ್ಗೆ ಅವಲೋಕಿಸಬೇಕು. ನೆರೆಹೊರೆಯ ರೋಗಿಗಳನ್ನು ಸಂದರ್ಶಿಸಬೇಕು. ಸಹಕರಿಸಬೇಕು, ಸಾಲನೀಡಬೇಕು. ಮರಣ ಹೊಂದಿದಾಗ ಸಂಬಂಧಿಕರಿಗೆ ಸಮಾಧಾನ ಹೇಳಿ ಸಂತೈಸಬೇಕು.
ಜಾತಿ, ವಯಸ್ಸು, ಹೆಣ್ಣು-ಗಂಡು, ಶ್ರೀಮಂತ-ಬಡವ ಎಂಬ ಭೇದ-ಭಾವ ಇರಬಾರದು. ತಪ್ಪನ್ನು ಕ್ಷಮಿಸಿ ಸಮಾಧಾನ ಹೇಳಬೇಕು. ಸಂತೋಷ-ಸಂಕಟಗಳಲ್ಲಿ ನೆರೆಹೊರೆಯವರು ಪಾಲ್ಗೊಳ್ಳಬೇಕು. ಶುಭಾಶಯ ತಿಳಿಸಬೇಕು. ಅವರ ದುಃಖದಲ್ಲಿ ಪಾಲ್ಗೊಳ್ಳ ಬೇಕು. ನಿರಾಶ್ರಿತರನ್ನು ರಕ್ಷಿಸಿ ಸಂರಕ್ಷಿಸಬೇಕಾದದ್ದು, ಮಾನವ ಧರ್ಮ.