

Rahul Gandhi Malaysia Trip: ಬಿಹಾರ ವಿಧಾನಸಭಾ ಚುನಾವಣೆಯ ಭರ್ಜರಿ ಪ್ರಚಾರದ ನಡುವೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಲೇಷ್ಯಾದ ಪ್ರಸಿದ್ಧ ಪ್ರವಾಸಿ ತಾಣವಾದ ಲಂಗ್ಕಾವಿಗೆ ತೆರಳಿರುವುದನ್ನು ಬಿಜೆಪಿ ವ್ಯಂಗ್ಯವಾಡಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಬಿಹಾರದ ರಾಜಕೀಯದ ಬಿಸಿ ಮತ್ತು ಧೂಳು ಕಾಂಗ್ರೆಸ್ ಯುವರಾಜನಿಗೆ ತುಂಬಾ ಭಾರವಾದಂತೆ ಕಾಣುತ್ತಿದೆ, ರಾಹುಲ್ ವಿಶ್ರಾಂತಿ ಪಡೆಯಲು ತುಂಬಾ ಆತುರದಲ್ಲಿದ್ದಾರೆ, ಇದು ಯಾರಿಗೂ ತಿಳಿಯಬಾರದ ರಹಸ್ಯ ಸಭೆಗಳಲ್ಲಿ ಒಂದಾ?, ಜನರು ನಿಜವಾದ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವಾಗ, ರಾಹುಲ್ ಗಾಂಧಿ ಅಲ್ಲಿಂದ ಕಾಣೆಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಹಾರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡ ಮತದಾರರ ಅಧಿಕಾರ ಯಾತ್ರೆ ಸೆಪ್ಟೆಂಬರ್ 1 ರಂದು ಮುಕ್ತಾಯವಾಗಿದ್ದು, ಕೇವಲ ಎರಡು ವಾರಗಳಲ್ಲಿ ಸುಮಾರು 1,300 ಕಿಲೋಮೀಟರ್, 25 ಜಿಲ್ಲೆಗಳು ಮತ್ತು ಸರಿಸುಮಾರು 110 ವಿಧಾನಸಭಾ ಕ್ಷೇತ್ರಗಳನ್ನು ಈ ಯಾತ್ರೆ ಕ್ರಮಿಸಿದೆ ಎಂದು ವರದಿಯಾಗಿದೆ.
ಬಿಜೆಪಿ ಪದೇ ಪದೇ ರಾಹುಲ್ರ ವಿದೇಶ ಪ್ರವಾಸಗಳನ್ನು ಗುರಿಯಾಗಿಸಿಕೊಂಡಿದ್ದು, ವಿಶೇಷವಾಗಿ ಸಂಸತ್ತಿನ ಅಧಿವೇಶನಗಳ ಸಮಯದಲ್ಲಿ ಅವರ ಪ್ರವಾಸ ಬಿಜೆಪಿಯಿಂದ ಟೀಕೆಗಳನ್ನು ಎದುರಿಸುತ್ತಿದೆ. ಈ ವರ್ಷದ ಬಜೆಟ್ ಅಧಿವೇಶನದಲ್ಲಿ, ವಿಪಕ್ಷ ನಾಯಕ, ವಿಯೆಟ್ನಾಂ ಮತ್ತು ಇತರ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ. ಇಂತಹ ಬಹಿರಂಗಪಡಿಸದ ಪ್ರವಾಸಗಳು ವಿರೋಧ ಪಕ್ಷದ ನಾಯಕನಿಗೆ ಯೋಗ್ಯವಲ್ಲ ಎಂದಿರುವ ಕಮಲ ಪಾಳಯ, ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.(ಏಜೆನ್ಸೀಸ್)