

Kerala Congress Tweet: ಬಿಹಾರದ ವಿಷಯವಾಗಿ ವಿವಾದಾತ್ಮಕ ಪೋಸ್ಟ್ವೊಂದು ದೇಶ್ಯಾದ್ಯಂತ ಟೀಕೆಗೆ ಗುರಿಯಾದ ನಂತರ ಕಾಂಗ್ರೆಸ್ನ ಕೇರಳ ಘಟಕದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ವಿಟಿ ಬಲರಾಮ್ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.
ಕೇರಳದ ತ್ರಿತಾಲ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬಲರಾಮ್, ಇತ್ತೀಚೆಗೆ ಘೋಷಿಸಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬದಲಾವಣೆಗಳ ಸಂದರ್ಭದಲ್ಲಿ ಬಿಹಾರವನ್ನು ಬೀಡಿಗಳೊಂದಿಗೆ ಹೋಲಿಸಿ ಕೆಪಿಸಿಸಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಬೀಡಿಗಳ ಮೇಲಿನ ತೆರಿಗೆಯನ್ನು ಶೇ.28 ರಿಂದ ಶೇ.18 ಕ್ಕೆ ಇಳಿಸುವ ಮತ್ತು ಸಿಗರೇಟ್ಗಳ ಮೇಲಿನ ದರಗಳನ್ನು ಹೆಚ್ಚಿಸುವ ಜಿಎಸ್ಟಿ ಕೌನ್ಸಿಲ್ ನಿರ್ಧಾರವನ್ನು ಉಲ್ಲೇಖಿಸುವ ಹೇಳಿಕೆಯು ಬಿಹಾರ ಮತ್ತು ಅದರ ಜನರ ಕಡೆಗೆ ಅವಹೇಳನಕಾರಿಯಾಗಿದೆ ಎಂದು ವ್ಯಾಖ್ಯಾನಿಸಲಾಗಿತ್ತು, ಬಿಹಾರವು ದೇಶದ ಪ್ರಮುಖ ಬೀಡಿ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದ್ದು, ದೇಶಾದ್ಯಂತ ಅಂದಾಜು 70 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಾರೆ ಎನ್ನಲಾಗಿದೆ.
ಈ ಪೋಸ್ಟ್ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ, ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾದ ನಂತರ ಬಿಹಾರದ ಆಡಳಿತಾರೂಢ ಎನ್ಡಿಎ ನಾಯಕರು ಕಾಂಗ್ರೆಸ್ ರಾಜ್ಯವನ್ನು ಅವಮಾನಿಸಿದೆ ಎಂದು ಆರೋಪಿಸಿದರು, ಆರ್ಜೆಡಿ ಸಹಿತ ಇತರ ಮಿತ್ರಪಕ್ಷಗಳು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡರು.
ಕಳೆದ ವರ್ಷ ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿದ್ದ ಡಾ. ಪಿ. ಸರಿನ್ ಸಿಪಿಐ(ಎಂ) ಸೇರಿದಾಗಿನಿಂದ, ಆ ಸ್ಥಾನವನ್ನು ಬಲರಾಮ್ ನಿಭಾಯಿಸುತ್ತಿದ್ದರು.(ಏಜೆನ್ಸೀಸ್)