

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ 15ನೇ ವರ್ಷದ ನವರಾತ್ರಿ ಮಹೋತ್ಸವವನ್ನು ಅ.3ರಿಂದ 12ರವರೆಗೆ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಸಮಿತಿಯ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ತಿಳಿಸಿದರು.
ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಹದಿನಾಲ್ಕು ವರ್ಷಗಳಿಂದ ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ನವರಾತ್ರಿ ದುರ್ಗಾ ಪೂಜೆಯನ್ನು ಸಮಿತಿಯು ವಿಶೇಷ, ವಿಭಿನ್ನವಾಗಿ ನಡೆಸಿಕೊಂಡು ಬಂದಿದೆ. ಭಕ್ತರು, ದಾನಿಗಳು ಹಾಗೂ ಸಮಿತಿಯ ಸರ್ವ ಸದಸ್ಯರ ಸಹಕಾರ ಇದಕ್ಕೆ ಕಾರಣ ಎಂದರು.
ಈ ಬಾರಿ ಹತ್ತು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿದಿನ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ, ವಿಜಯ ದಶಮಿಯಂದು ಹದಿನೈದು ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಗುವುದು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ, ಸಾಧಕರಿಗೆ ಗುರುರಕ್ಷೆ ನೀಡಲಾಗುವುದು. ಕಡೆಯ ದಿನ ವೈಭವಯುತವಾಗಿ ದುರ್ಗಾದೇವಿಯ ಜಲಸ್ತಂಭನಾ ಶೋಭಾಯಾತ್ರೆಯು ವಿವಿಧ ಕಲಾತಂಡಗಳೊಂದಿಗೆ ನಡೆಯಲಿದೆ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ ಮಾತನಾಡಿ, ಪಟ್ಟಣದಲ್ಲಿ ದುರ್ಗಾ ಉತ್ಸವವು ಭಕ್ತರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ವಿಜೃಂಭಣೆಯಿಂದ ನಡೆಯುತ್ತಿದೆ. ನವರಾತ್ರಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ದೇವಾಲಯದಿಂದ ನೀಡಲಾಗುವುದು. ಮಾರ್ಕಾಂಡೇಶ್ವರ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು ಈ ಹಿನ್ನೆಲೆಯಲ್ಲಿ ಇಲ್ಲಿನ ಕಾರ್ಯಕ್ರಮಗಳು ಸಾಂಗವಾಗಿ ನಡೆದು ಯಶಸ್ವಿಯಾಗುತ್ತಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಚನ್ನಕೇಶವ್ ಬರಗಲ್, ಪ್ರಸನ್ನಾ ಜಿ.ಭಟ್, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ, ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಸಹ ಖಜಾಂಚಿ ಚೈತನ್ಯ ವೆಂಕಿ ಮತ್ತಿತರರಿದ್ದರು.