

ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ನಟನೆಯ 'ಡಂಕಿ' ಸಿನಿಮಾದ ಟೀಸರ್ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ನಟನ ಜನ್ಮದಿನಕ್ಕೆ ಚಿತ್ರದ ಡ್ರಾಪ್ 1 ಎಂಬ ಟೈಟಲ್ನಡಿ ಬಂದ ಝಲಕ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ದೀಪಾವಳಿ ಹಬ್ಬದ ಹಿನ್ನಲೆ ಎರಡು ಹೊಚ್ಚ ಹೊಸ ಪೋಸ್ಟರ್ಗಳನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
ಪ್ರೀತಿ, ನಗು ಹಾಗೂ ಸ್ನೇಹ ತುಂಬಿರುವ ಎರಡು ಹೊಸ ಪೋಸ್ಟರ್ನಲ್ಲಿ ಶಾರುಖ್ ಸ್ನೇಹ ಬಳಗವನ್ನು ಪರಿಚಯ ಮಾಡಿಕೊಡಲಾಗಿದೆ. ಕಿಂಗ್ ಖಾನ್ ಜತೆ ನಟಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಹಾಗೂ ಅನಿಲ್ ಗ್ರೋವರ್ ಒಟ್ಟಿಗೆ ನಿಂತು ನಗು ಬೀರಿದ್ದಾರೆ. ಎರಡು ಪೋಸ್ಟರ್ಗಳು ಆಕರ್ಷಕವಾಗಿ ಮೂಡಿಬಂದಿವೆ.
ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ನಿರ್ದೇಶಕರು ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನು 'ಡಂಕಿ' ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.
ಈ ಹಿಂದೆಯೇ ಚಿತ್ರತಂಡ ತಿಳಿಸಿರುವಂತೆ ಸಿನಿಮಾ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಎರಡು ಹೊಸ ಪೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಸಿನಿಮಾವನ್ನು ತೆರೆ ಮೇಲೆ ನೋಡಲು ಶಾರೂಖ್ ಅಭಿಮಾನಿಗಳು ತೀವ್ರ ಕಾತರದಿಂದ ಕಾಯತೊಡಗಿದ್ದಾರೆ,(ಏಜೆನ್ಸೀಸ್).