

ಬೆಂಗಳೂರು: 2021ರಲ್ಲಿ ಬಿಡುಗಡೆಯಾದ ಸಲಗ ಚಿತ್ರವನ್ನು ನಟಿಸಿ, ನಿರ್ದೇಶಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದ ನಟ ದುನಿಯಾ ವಿಜಯ್ ಆ ಬಳಿಕ ಭೀಮ ಚಿತ್ರ ಮಾಡುತ್ತಿರುವುದಾಗಿ ಘೋಷಿಸಿದ್ದರು. ಚಿತ್ರ ಶುರುವಾದ ಮೊದಲ ದಿನದಿಂದಲೂ ತಾರಬಳಗ ಆಯ್ಕೆ ಸೇರಿದಂತೆ ಹಲವು ವಿಚಾರಗಳಿಗೆ ಸಿನಿರಸಿಕರ ಗಮನ ಸೆಳೆದಿದ್ದು, ಬಿಡುಗಡೆಗೂ ಮುನ್ನ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇತ್ತ ಭೀಮ ಸಿನಿಮಾಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಒಂದು ಹೊರಬಿದ್ದಿದ್ದು, ಚಿತ್ರ ಬಿಡುಗಡೆಯನ್ನು ಕಾತುರದಿಂದ ಕಾಯುತ್ತಿದ್ದಾರೆ.
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರವು ಆಗಸ್ಟ್ 09ರಂದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದುನಿಯಾ ವಿಜಯ್ ಖಚಿತಪಡಿಸಿದ್ದು, ಕನ್ನಡದ ಸ್ಟಾರ್ ಹೀರೋ ಸಿನಿಮಾ ಜೊತೆ ಕ್ಲ್ಯಾಶ್ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ವಿಜಯ್ ಅವರು ಸಲಗ ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಮೊದಲ ಚಿತ್ರದಲ್ಲೇ ಅವರಿಗೆ ಗೆಲುವಿನ ರುಚಿ ಸಿಕ್ಕಿತು. ಈ ಚಿತ್ರ ರೌಡಿಸಂ ಕಥೆಯನ್ನು ಹೊಂದಿತ್ತು. ಈಗ ಅದೇ ರೀತಿಯ ಥೀಮ್ ಇಟ್ಟುಕೊಂಡು ಭೀಮ ಸಿನಿಮಾ ನಿರ್ದೇಶನ ಮಾಡಿದ್ದಾರೆ ವಿಜಯ್. ಈ ಚಿತ್ರವನ್ನು ಆಗಸ್ಟ್ 9ರಂದು ರಿಲೀಸ್ ಮಾಡೋ ಘೋಷಣೆ ಮಾಡಿದ್ದಾರೆ.
ಈ ಮೊದಲು ಸಲಗ ಹಾಗೂ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗಿತ್ತು. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುದೀಪ್ ಅವರು, ಮ್ಯಾಕ್ಸ್ ಚಿತ್ರ ಆಗಸ್ಟ್ನಲ್ಲಿ ರಿಲೀಸ್ ಆಗಲಿದೆ ಎಂದಿದ್ದರು. ಹೀಗಾಗಿ, ಮತ್ತೊಮ್ಮೆ ದುನಿಯಾ ವಿಜಯ್ ಹಾಗೂ ಸುದೀಪ್ ಸಿನಿಮಾ ಮುಖಾಮುಖಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಭೀಮ ಸಿನಿಮಾದಲ್ಲಿ ಅಶ್ವಿನಿ ಅಂಬರೀಷ್, ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶಿವಕುಮಾರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಬರೆದಿದ್ದು, ದೀಪು ಕುಮಾರ್ ಸಂಕಲನ ಚಿತ್ರಕ್ಕೆ ಇದೆ.