ಅಫ್ಘನ್​ ವಿರುದ್ಧ 47 ರನ್​ಗಳ ಜಯ; ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಿಷ್ಟು

Rohit Sharma
Published on

ಬಾರ್ಬೋಡಾಸ್​: ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ 43ನೇ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಅಫ್ಘಾನಿಸ್ತಾನ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದ್ದು, ಸೂಪರ್​ 08 ಹಂತದ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೂ ಟೀಮ್​ ಇಂಡಿಯಾ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದ್ದು, ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಸಜ್ಜಾಗುತ್ತಿದೆ.

ಇನ್ನೂ ತಂಡದ ಆಲ್ರೌಂಡ್​ ಪ್ರದರ್ಶನದ ಕುರಿತು ಮಾತನಾಡಿರುವ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ, ಕಳೆದ ಎರಡು ವರ್ಷಗಳಿಂದ ನಾವು ಇಲ್ಲಿ ಟಿ20 ಪಂದ್ಯಗಳನ್ನು ಆಡಿದ್ದು, ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ಪರಿಸ್ಥಿತಿಗೆ ತಕ್ಕಂತೆ ಯೋಜನೆ ರೂಪಿಸಿ ಆಟವಾಡುತ್ತಿದ್ದೇವೆ. ಬ್ಯಾಟರ್​ಗಳು ಈ ಪಿಚ್​ನಲ್ಲಿ 180 ರನ್​ ಗಳಿಸಿದರು. ಬೌಲರ್​ಗಳು ಅದನ್ನು ಸಮರ್ಥಿಸಿಕೊಂಡ ರೀತಿ ತುಂಬಾ ಚೆನ್ನಾಗಿತ್ತು. ಒಟ್ಟಾರೆಯಾಗಿ ನಾವು ತಂಡವಾಗಿ ನೀಡಿದ ಪ್ರದರ್ಶನ ಗೆಲುವಿನಲ್ಲಿ ಪ್ರಮುಖವಾಯಿತು.

Team India (1)

ಪ್ರತಿಯೊಬ್ಬ ಆಟಗಾರನು ತಮ್ಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸೂರ್ಯ ಮತ್ತು ಹಾರ್ದಿಕ್​ ಜೊತೆಯಾಟ ಮತ್ತು ಬುಮ್ರಾ ಬೌಲಿಂಗ್​ ಮಾಡಿದ ರೀತಿ ಪ್ರಶಂಸನೀಯವಾಗಿದೆ. ಬುಮ್ರಾ ಆಟವಾಡುತ್ತಿರುವ ರೀತಿ ತಂಡಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಯಾವ ಕ್ಷಣವಾದರೂ ಅವರು ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ.

ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಬ್ಯಾಟ್ಸ್​ಮನ್​ಗಳು ಸೂರ್ಯಕುಮಾರ್​ ಯಾದವ್​ (53 ರನ್, 28 ಎಸೆತ, 5 ಬೌಡಂರಿ, 3 ಸಿಕ್ಸರ್) ಅರ್ಧಶತಕದ ಫಲವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸಿತ್ತು. 182 ರನ್​ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಟೀಮ್​ ಇಂಡಿಯಾ ಬೌಲರ್​ಗಳು ಎದುರಾಳಿ ತಂಡವನ್ನು 134 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು, ತಂಡಕ್ಕೆ 47 ರನ್​ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net