

ಪರಮಾತ್ಮನ ಅಸ್ತಿತ್ವ (ಸದ್ರೂಪವು) ವು ಜಗತ್ತಿಗೆ ಉಪಾದಾನ ಕಾರಣವಾಗಿದೆ. ಆದ್ದರಿಂದ ಆ ಸದ್ರೂಪಕ್ಕೆ ಪ್ರಕೃತಿಯೆಂದೂ ಹೇಳಿರುತ್ತದೆ. ಅದರಂತೆ ಚಿದ್ರೂಪವು (ಚಿತ್ತ) ಜಗತ್ತಿಗೆ ನಿಮಿತ್ತ ಕಾರಣವಾಗಿದೆ. ಉದಾ: ಜೇಡರ ಹುಳವು ತನ್ನ ಬಾಯಲ್ಲಿಯ ಲಾಲಾರಸದಿಂದ ಎಳೆಗಳನ್ನು ಬಿಡುತ್ತಾ ಸುಂದರವಾದ ಬಲೆಯನ್ನು ಹೆಣೆಯುತ್ತದೆ. ಆ ಬಲೆಗೆ ಲಾಲಾರಸವೇ ಉಪಾದಾನ ಕಾರಣ. ತಾನೇ ಬಲೆ ಹೆಣೆಯುವದರಿಂದ ನಿಮಿತ್ತ ಕಾರಣ. ಇದಕ್ಕೆ ಅಭಿನ್ನ ನಿಮಿತ್ಯ ಉಪಾದಾನ ಕಾರಣವೆಂದು ಕರೆಯುತ್ತಾರೆ.
ಹಾಗೇ-ಪರಮಾತ್ಮನು ಈ ಜಗತ್ತಿಗೆ ಅಭಿನ್ನ ನಿಮಿತ್ತೋಪಾದ ಕಾರಣನಾಗಿರುತ್ತಾನೆಂಬ ಭಾವವು. ಇದಕ್ಕೆ ವೇದ ಪ್ರಮಾಣವಿದೆ. ‘ಸದೇವಸೌಮ್ಯೇದಮಗ್ರಮಾಸೀತ್’ - ಕಾಣುವ ನಾಮರೂಪಾತ್ಮಕ ಪ್ರಪಂಚಕ್ಕಿಂತಲೂ ಮೊದಲು ಸತ್ತು (ಸದ್ರೂಪ) ಇತ್ತು. ಅದೇ ಇದೆಲ್ಲಾ ಆಗಿದೆ. ಮೂರ್ತ-ಅಮೂರ್ತ, ಜಡ-ಚೈತನ್ಯ, ಆತ್ಮ-ಅನಾತ್ಮ ಹೀಗೆ ನಾಮರೂಪಗಳ ವಿಶ್ವಲೀಲೆ ತಾಂಡವವಾಡಿದೆ. ಆ ಪರಮಾತ್ಮನೇ ಅನಂತಕೋಟಿ ಬ್ರಹ್ಮಾಂಡಗಳನ್ನು ತನ್ನಲ್ಲಿ ಹುಟ್ಟಿಸಿ, ಗರ್ಭೀಕರಿಸಿ, ತನ್ನಲ್ಲಿ ಲಯಮಾಡಿಕೊಂಡ. ಆ ಅಖಂಡ ಪರಿಪೂರ್ಣವಸ್ತು ತಾನು ತಾನಾಗಿಯೇ ಇದೆ. ಬಣ್ಣ ಹಲವಪ್ಪಲ್ಲಿ ಬಣ್ಣ ತಾನೊಂದಾಗಿ/ಬಣ್ಣ ಮೂಜಗಕೆ ಮುಕ್ಕಣ್ಣ ತಾನು ಎಂಬ ಶರಣರ ವಚನದಂತೆ ವಿಶ್ವವೆಲ್ಲವೂ ತಾನಾದನೆಂದರೆ, ವಿಶ್ವದ ಉತ್ಪತ್ತಿ, ಸ್ಥಿತಿ, ಲಯಕ್ಕೆ ಒಳಗಾದನೇ? ಇಲ್ಲ, ಕಾರಣವೆಂದಡೆ- ಅಜಾತನಾದ ಆ ಪರಮಾತ್ಮನಿಗೆ ಉತ್ಪತ್ತಿ ಇಲ್ಲ.
ಕರ್ಮರಹಿತನಾದ ಅವನಿಗೆ ಹೋಗುವ ಬರುವ ಸ್ಥಿತಿ ಇಲ್ಲ (ಸ್ಥಿತಿಯೊಳಗಲ್ಲ) ಇನ್ನೂ ಮರಣ ರಹಿತನಾದುದರಿಂದ ಲಯಕ್ಕೆ ಒಳಗಲ್ಲ. ಹೀಗೆ ಸೃಷ್ಟಿ ಸ್ಥಿತಿ ಲಯಗಳಿಗೆ ಅವನು ಅತೀತ. ಜಗವಾಗಲೂ ಬಲ್ಲ ಜಗವಾಗದಿರಲೂ ಬಲ್ಲ. ಇದೇ ಅವನ ಲೀಲಾವಿನೋದ. ಪ್ರಪಂಚಮುಖವಾದ ಶಕ್ತಿಯ ಲೀಲೆ ಸಂಸಾರವೆನಿಸಿಕೊಂಡಿತು. ಊರ್ಧ್ವುುಖವಾದ ಭಕ್ತಿಯ ಲೀಲೆ ಸ್ವಯಂಭು ಸಚ್ಚಿದಾನಂದ ನಿತ್ಯ ಪೂರ್ಣವೆನಿಸಿಕೊಂಡಿತು. ನಿಜವಸ್ತು ಒಂದು ಏಕಮೇವ ಅದ್ವಿತೀಯ. ಭೂತ ಭೌತಿಕ ವಸ್ತುಗಳಲ್ಲಿ ಸತ್ ಬೆರೆತುಕೊಂಡಿದೆ. ಆ ಸತ್ತನ್ನು ಚಿದ್ರೂಪವು (ಚಿತ್ತ) ಅರಿಯುತ್ತದೆ. ಆದ್ದರಿಂದ ಈ ಜಗತ್ತಿಗೆ ಪರಮಾತ್ಮನು ಅಭಿನ್ನನಿಮಿತ್ತೋಪಾದ ಕಾರಣನಾಗಿದ್ದಾನೆ.