

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆಯ ಮೇರೆಗೆ ಧಾರ್ಮಿಕ ಸಮಿತಿಯು ರಾಷ್ಟ್ರ ರಾಜಧಾನಿಯಲ್ಲಿರುವ ಹಲವಾರು ದೇವಾಲಯಗಳನ್ನು ಕೆಡವಲಿದೆ ಎಂದು ಬುಧವಾರ(ಜನವರಿ 1) ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ವಿರುದ್ಧ ಮುಖ್ಯಮಂತ್ರಿ ಅತಿಶಿ(Atishi) ಆರೋಪಿಸಿದ್ದಾರೆ.
ಇಂತಹ ಆದೇಶಗಳ ಮೂಲಕ ಬಿಜೆಪಿಯ ದ್ವಂದ್ವ ಮುಖ ಬಯಲಾಗಿದೆ. ಒಂದೆಡೆ ಅವರು ಹಿಂದೂ ಧರ್ಮವನ್ನು ರಕ್ಷಿಸುವಂತೆ ನಟಿಸುತ್ತಾರೆ.ಮತ್ತೊಂದೆಡೆ ದೇವಾಲಯಗಳನ್ನು ಕೆಡವಲು ತಮ್ಮ ಅಧಿಕಾರಿಗಳು ಮತ್ತು ಎಲ್ಜಿಗೆ ರಹಸ್ಯವಾಗಿ ಸೂಚನೆ ನೀಡುತ್ತಾರೆ ಎಂದು ಅತಿಶಿ ಹೇಳಿದರು.
ದೇವಾಲಯಗಳ ಸ್ಥಳಾಂತರ ಅಥವಾ ಅವುಗಳನ್ನು ಕೆಡವುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಧಾರ್ಮಿಕ ಸಮಿತಿಯಿದೆ. ಇದು ಕಳೆದ ವರ್ಷದವರೆಗೆ ದೆಹಲಿ ಸರ್ಕಾರದ ಗೃಹ ಸಚಿವರ ಅಡಿಯಲ್ಲಿ ಬರುತ್ತಿತ್ತು. ಮೊದಲು ಈ ಸಮಿತಿಯ ಎಲ್ಲಾ ನಿರ್ಧಾರಗಳನ್ನು ಗೃಹ ಸಚಿವರ ಮುಂದೆ ಇಡುತ್ತಿತ್ತು ಮತ್ತು ಅವರ ಅನುಮೋದನೆಯ ನಂತರವೇ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು.
ಆದರೆ, ಕಳೆದ ವರ್ಷ ಯಾವುದೇ ಧಾರ್ಮಿಕ ಸ್ಥಳವನ್ನು ಕೆಡವುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿದೆ. ಆದ್ದರಿಂದ ಇದು ದೆಹಲಿ ಎಲ್ಜಿ ಅಡಿಯಲ್ಲಿ ಬರುತ್ತದೆ. ಮತ್ತು ಈ ವಿಚಾರವಾಗಿ ದೆಹಲಿ ಸಿಎಂ ಅಥವಾ ಗೃಹ ಸಚಿವರಿಗೆ ಯಾವುದೇ ಸಂಬಂದವಿಲ್ಲ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದ್ದರು. ಈಗ ಧಾರ್ಮಿಕ ಸಮಿತಿಯು ನೇರವಾಗಿ ದೆಹಲಿ ಎಲ್ಜಿ ಅಡಿಯಲ್ಲಿದೆ ಎಂದು ಸಿಎಂ ಅತಿಶಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಸಮಿತಿಯ ಅಧ್ಯಕ್ಷರು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಮತ್ತು ಅವರು ಸಮಿತಿಯ ಸಲಹೆಗಳನ್ನು ನೇರವಾಗಿ ಲೆಫ್ಟಿನೆಂಟ್ ಗವರ್ನರ್ ಅನುಮೋದನೆಗಾಗಿ ಕಳುಹಿಸುತ್ತಾರೆ ಎಂದು ಅತಿಶಿ ಹೇಳಿದ್ದಾರೆ. ತನ್ನ ಆರೋಪಗಳ ಆಧಾರವನ್ನು ವಿವರಿಸಿದ ಅತಿಶಿ, ನವೆಂಬರ್ 22 ರಂದು ಸಕ್ಸೇನಾ ನೇತೃತ್ವದ ಸಭೆಯಲ್ಲಿ ಹಿಂದೂ ಮತ್ತು ಬೌದ್ಧ ದೇವಾಲಯಗಳನ್ನು ಕೆಡವುವ ನಿರ್ಧಾರವನ್ನು ನಿರ್ಧರಿಸಲಾಯಿತು ಎಂದು ಹೇಳಿದರು
ನವೆಂಬರ್ 22 ರಂದು ನಡೆದ ಸಭೆಯಲ್ಲಿ ಪಶ್ಚಿಮ ಪಟೇಲ್ ನಗರ, ದಿಲ್ಶಾದ್ ಗಾರ್ಡನ್, ಸೀಮಾಪುರಿ, ಗೋಕಲ್ಪುರಿ, ನ್ಯೂ ಉಸ್ಮಾನ್ಪುರ ಮತ್ತು ಸುಲ್ತಾನ್ಪುರಿಯಲ್ಲಿರುವ ಅನೇಕ ದೇವಾಲಯಗಳನ್ನು ಮತ್ತು ಸುಂದರ್ ನಗರಿಯಲ್ಲಿರುವ ಬೌದ್ಧ ದೇವಾಲಯವನ್ನು ಕೆಡವಲು ನಿರ್ಧರಿಸಲಾಯಿತು. ಇದೆಲ್ಲವೂ ಸಭೆಯ ನಡಾವಳಿಯಲ್ಲಿದೆ. ದೆಹಲಿ ಎಲ್ಜಿ ಇದನ್ನು ಅನುಮೋದಿಸಿದೆ ಮತ್ತು ಈಗ ಡಿಎಂಗಳು ಮತ್ತು ಎಸ್ಡಿಎಂಗಳು ಈ ದೇವಾಲಯಗಳನ್ನು ಕೆಡವಲು ತಯಾರಿ ನಡೆಸುತ್ತಿದ್ದಾರೆ ಎಂದು ಅತಿಶಿ ಆರೋಪಿಸಿದ್ದಾರೆ.
ಈ ಆರೋಪ ಸುಳ್ಳು, ದೇವಾಲಯಗಳನ್ನು ಕೆಡವಲು ಯಾವುದೇ ಆದೇಶವಿಲ್ಲ ಎಂದು ಎಲ್ಜಿ ಕಚೇರಿ ಮಂಗಳವಾರ ತಿಳಿಸಿದೆ. ಸಕ್ಸೇನಾಗೆ ಅತಿಶಿ ಬರೆದ ಎರಡು ಪುಟಗಳ ಪತ್ರದಲ್ಲಿ ಪಶ್ಚಿಮ ಪಟೇಲ್ ನಗರ, ದಿಲ್ಶಾದ್ ಗಾರ್ಡನ್, ಸುಂದರ್ ನಗ್ರಿ, ಸೀಮಾಪುರಿ, ಗೋಕಲ್ಪುರಿ ಮತ್ತು ನ್ಯೂ ಉಸ್ಮಾನ್ಪುರದಲ್ಲಿರುವ ಆರು ರಚನೆಗಳನ್ನು ಪಟ್ಟಿಮಾಡಲಾಗಿದೆ.(ಏಜೆನ್ಸೀಸ್)