

ನವದೆಹಲಿ: ರಾಷ್ಟ್ರರಾಜಧಾನಿಯ ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರಿಗಾಗಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಅರ್ಚಕರಿಗೆ ಪ್ರತಿ ತಿಂಗಳು 18000 ರೂಪಾಯಿ ಗೌರವ ನೀಡಲಾಗುತ್ತದೆ. ನೋಂದಣಿ ನಾಳೆಯಿಂದ ಅಂದರೆ ಡಿಸೆಂಬರ್ 31ರಿಂದ ಆರಂಭವಾಗಲಿದೆ ಎಂದು ಹೇಳಿದರು.
ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುವವರಿಗಾಗಿ ಇಂದು ನಾನು ಹೊಸ ಯೋಜನೆ ಘೋಷಣೆ ಮಾಡಲಿದ್ದೇನೆ. ಯಾವ ಪಕ್ಷವಾಗಲಿ, ಸರ್ಕಾರವಾಗಲಿ ಅವರತ್ತ ಗಮನ ಹರಿಸಿಲ್ಲ. ನಾನು ಘೋಷಿಸಲಿರುವ ಯೋಜನೆಯ ಹೆಸರು 'ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ'. ಈ ಯೋಜನೆಯಡಿ ದೇವಸ್ಥಾನದಲ್ಲಿ ಪೂಜೆ ನಡೆಸುವ ಅರ್ಚಕರಿಗೆ ಹಾಗೂ ಗುರುದ್ವಾರದಲ್ಲಿ ಪೂಜೆ ನಡೆಸುವ ಅರ್ಚಕರಿಗೆ ಗೌರವಧನ ನೀಡಲು ಅವಕಾಶವಿದೆ. ಡಿಸೆಂಬರ್ 31 ರಿಂದ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನದಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ಯೋಜನೆಯಡಿ ಅರ್ಚಕರಿಗೆ ಪ್ರತಿ ತಿಂಗಳು 18 ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ನಮ್ಮ ಎಲ್ಲಾ ಸುಖ-ದುಃಖಗಳಲ್ಲಿ ಅರ್ಚಕರು ಉಪಸ್ಥಿತಿ ಇದ್ದೇ ಇರುತ್ತದೆ ಎಂಬುದು ನಮಗೆ ಗೊತ್ತಿದೆ. ಮಗು ಹುಟ್ಟಿದಾಗಿನಿಂದ ಯಾರದೋ ಸಾವಿನವರೆಗೂ ಪುರೋಹಿತರು ನಮ್ಮೊಂದಿಗಿರುತ್ತಾರೆ. ಶತಮಾನಗಳಿಂದ ನಮ್ಮ ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿದ ವರ್ಗ ಇದು. ಈ ವರ್ಗವು ಅವರ ಕುಟುಂಬದತ್ತ ಗಮನ ಹರಿಸಲಿಲ್ಲ. ಆದರೆ ನಾವು ಅವರ ಕುಟುಂಬದತ್ತ ಗಮನ ಹರಿಸುತ್ತಾ ಅವರನ್ನು ಗೌರವಿಸುವ ಸಲುವಾಗಿ ಈ ಯೋಜನೆಯನ್ನು ಪ್ರಕಟಿಸುತ್ತಿದ್ದೇನೆ ಎಂದು ಹೇಳಿದರು.
ನಾವು ದೆಹಲಿಯಲ್ಲಿ ಮೊದಲ ಬಾರಿಗೆ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಉತ್ತಮ ಶಾಲೆಗಳು, ಉತ್ತಮ ಆಸ್ಪತ್ರೆಗಳು, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿದ ಹಾಗೆ... ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಇದರಿಂದ ಏನನ್ನಾದರೂ ಕಲಿತು ತಮ್ಮ ತಮ್ಮ ರಾಜ್ಯಗಳಲ್ಲಿ ಇಂತಹ ಯೋಜನೆಯನ್ನು ತರಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು. ಈ ಹಿಂದೆ ಎರಡು ಯೋಜನೆಗಳನ್ನು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದ ನಂತರ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2,100 ರೂಪಾಯಿ, ಸಂಜೀವನಿ ಯೋಜನೆಯಡಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದರು. (ಏಜೆನ್ಸೀಸ್)