ಡಿಟಿಡಿ ನೋಂದಣಿಯೂ ಸ್ಥಗಿತ

Kaveri F
Published on

ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ನೋಂದಣಿಗೆ ಡಿಜಿಟಲ್ ಖಾತಾ ಕಡ್ಡಾಯ ಮಾಡಿರುವ ಪರಿಣಾಮ ರಾಷ್ಟ್ರೀಕೃತ, ಸಹಕಾರ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ಕೋಟ್ಯಂತರ ರೂ. ನಷ್ಟ ಅನುಭವಿಸುವಂತೆ ಆಗಿದೆ.

ಸಾಲಕ್ಕಾಗಿ ಆಧಾರ ಮಾಡುವ ಸ್ಥಿರಾಸ್ತಿ ದಾಖಲೆಗಳ ಡಿಟಿಡಿ (ಡೆಪಾಸಿಟ್ ಆ್ ಟೈಟಲ್ ಡೀಡ್) ಉಪ ನೋಂದಣಿ ಕಚೇರಿಯಲ್ಲಿ ಡಿಜಿಟಲ್ ಖಾತಾ ಇಲ್ಲವೆಂದು ನೊಂದಣಿ ಮಾಡುತ್ತಿಲ್ಲ. ಸಾಲ ಸೌಲಭ್ಯ ವಿತರಿಸುವ ಬ್ಯಾಂಕುಗಳಿಗೆ ಮತ್ತು ಸಾಲ ಪಡೆಯುವರಿಗೆ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಈ ಕೂಡಲೇ ಪರಿಹರಿಸಬೇಕೆಂದು ಬೆಂಗಳೂರು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಡಾ. ಎಂ.ಆರ್. ವೆಂಕಟೇಶ್, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ಡಿಟಿಡಿ ನೋಂದಣಿ ಆಗುತ್ತಿಲ್ಲ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳು ಪೂರ್ಣ ಇ-ಖಾತಾ ವಿತರಿಸಿಲ್ಲ. ಇದರಿಂದ ಬ್ಯಾಂಕುಗಳಲ್ಲಿ ಮತ್ತು ಸೊಸೈಟಿಗಳಲ್ಲಿ ಮಂಜೂರಾದ ಸಾಲಗಳನ್ನು ಸಕಾಲದಲ್ಲಿ ಬ್ಯಾಂಕಿನ ಗ್ರಾಹಕರು ಸ್ವೀಕರಿಸುತ್ತಿಲ್ಲ.

ಬ್ಯಾಂಕುಗಳ, ಕ್ರೆಡಿಟ್ ಸೊಸೈಟಿಗಳ ಅದರಲ್ಲೂ ಪಟ್ಟಣ ಸಹಕಾರ ಬ್ಯಾಂಕುಗಳ ದಿನನಿತ್ಯದ ಚಟುವಟಿಕೆಗಳು ಕುಂಠಿತವಾಗಿದೆ. ಗ್ರಾಹಕರಿಗೂ ತುಂಬಾ ತೊಂದರೆಯಾಗುತ್ತಿದೆ. ವ್ಯಾಪಾರ ಅಭಿವೃದ್ಧಿ ಅಥವಾ ಶುಭಕಾರ್ಯಗಳಿಗೆ ಹಣದ ಅವಶ್ಯಕತೆ ಇದ್ದವರು ಸ್ಥಿರಾಸ್ತಿಗಳನ್ನು ಅಡಮಾನ ಮಾಡಿ ತೆಗೆದುಕೊಳ್ಳುವ ಸಾಲಗಳು ಸಕಾಲಕ್ಕೆ ಉಪಯೋಗಕ್ಕೆ ಬಾರದೆ ಪರಿತಪಿಸುತ್ತಿದ್ದಾರೆ.

ಬ್ಯಾಂಕುಗಳು ಸಾಲವನ್ನು ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಡಿಟಿಡಿ ಮಾಡಬೇಕಿದೆ. ಆದರಿಂದ ಸರ್ಕಾರ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಡಿಟಿಡಿ ನೋಂದಣಿಗೆ ತೊಂದರೆ ಆಗದಂತೆ ಮಾರ್ಗದರ್ಶನ ನೀಡಬೇಕು. ಆಸ್ತಿಗಳ ನೋಂದಣಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಮೋಸ-ವಂಚನೆ ತಡೆಗಟ್ಟುವಲ್ಲಿ ಸರ್ಕಾರ ತೆಗೆದುಕೊಳ್ಳುವ ಯಾವುದೇ ಉಪಕ್ರಮಗಳಿಗೆ ಜನತೆಯ ವಿರೋಧ ಇಲ್ಲ. ಪೂರ್ವ ತಯಾರಿ ಇಲ್ಲದೆ ದಿಢೀರ್ ತೀರ್ಮಾನದಿಂದ ಪ್ರತಿನಿತ್ಯ ಸಾವಿರಾರು ಜನರು ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ನಷ್ಟವಾಗುತ್ತಿದೆ. ಗಂಭೀರತೆ ಅರಿತು ಕೂಡಲೇ ಸರ್ಕಾರ ಕ್ರಮವಹಿಸಲು ಸಹಕಾರ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ಪರವಾಗಿ ಆಗ್ರಹಿಸುತ್ತಿರುವುದಾಗಿ ಡಾ. ಎಂ.ಆರ್. ವೆಂಕಟೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net