

ಹಳೇ ವಸ್ತುಗಳ ಖರೀದಿಗೆ ಒತ್ತಾಯಿಸಿ ಸಂಸದ ಪ್ರತಾಪ್ ಸಿಂಹ ಮನೆಗೆ ಗುರುವಾರ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ದಸಂಸ ಕಾರ್ಯಕರ್ತರ ಮುತ್ತಿಗೆ ಯತ್ನಕ್ಕೆ ತಡೆಯೊಡ್ಡಿದ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಕೋಮು ಧ್ವೇಷದ ಮಾತುಗಳನ್ನು ಆಡುತ್ತಿದ್ದಾರೆ. ಮುಸ್ಲಿಂ ಸಮುದಾಯದೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಮುಸ್ಲಿಮರು ನಮ್ಮೂರಿಗೆ ಹಳೇ ವಸ್ತುಗಳ ಖರೀದಿಗೆ ಆಗಮಿಸುತ್ತಿಲ್ಲ. ಈ ಹಳೇ ವಸ್ತುಗಳನ್ನು ಪ್ರತಾಪ್ ಸಿಂಹ ಖರೀದಿಸಬೇಕು ಎಂದು ಒತ್ತಾಯಿಸಿ ದಸಂಸ ಕಾರ್ಯಕರ್ತರು ಹಳೇ ಬಾಟಲ್, ಕಬ್ಬಿಣ, ಟಯರ್, ಟ್ಯೂಬ್‌ಗಳನ್ನು ಚೀಲದಲ್ಲಿ ತುಂಬಿಕೊಂಡು ವಿಜಯನಗರ 4ನೇ ಹಂತದಲ್ಲಿರುವ ಸಂಸದ ಪ್ರತಾಪ್ ಸಿಂಹ ಮನೆಗೆ ತೆರಳಿ ಮುತ್ತಿಗೆಗೆ ಯತ್ನಿಸಿದರು.
ಪ್ರತಿಭಟನೆ ವಿಚಾರ ತಿಳಿದ ಪೊಲೀಸರು ಪ್ರತಾಪ್ ಸಿಂಹ ಅವರ ಮನೆಯ ಬಳಿ ದಸಂಸ ಕಾರ್ಯಕರ್ತರಿಗೆ ತೆರಳುವುದಕ್ಕೆ ತಡೆಯೊ ಡ್ಡಿದರು. ಪ್ರತಾಪ್ ಸಿಂಹ ಅವರ ಮನೆಯಿಂದ 500 ಮೀಟರ್ ದೂರದಲ್ಲಿರುವ ವರ್ತುಲ ರಸ್ತೆಯ ಕನ್ನಡ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ತಡೆಯಲಾಯಿತು. ಈ ಸಂದರ್ಭ ಪೊಲೀಸರು ಹಾಗೂ ದಸಂಸ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ನಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದು ಬಿಡುಗಡೆ ಮಾಡಿದರು.