VIDEO| ಓದುತ್ತಿಲ್ಲವೆಂದು ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿಯ ಜಡೆ ಕಟ್​ ಮಾಡಿದ ಶಿಕ್ಷಕ

Ratlam teacher
Published on

ಭೋಪಾಲ್​: ಮಕ್ಕಳಿಗೆ ತಿದ್ದಿ, ಬುದ್ದಿ ಹೇಳಬೇಕಾಗಿರುವ ಶಿಕ್ಷಕನೇ ದಾರಿ ತಪ್ಪಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕನೋರ್ವ ಕುಡಿದ ಮತ್ತಿನಲ್ಲಿ ಬಾಲಕಿಯರ ಜಡೆ ಕತ್ತರಿಸಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ರಾಟೋಟಿ ತಾಲ್ಲೂಕಿನ ಸೆಮಲ್ಖೇಡಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಸೆಪ್ಟೆಂಬರ್​ 05ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಶಿಕ್ಷಕ ವೀರ್​ ಸಿಂಗ್​ ಎರಡು ಕೈಗಳಲ್ಲಿ ಕತ್ತರಿಯನ್ನು ಹಿಡಿದಿದ್ದು, ಐದನೇ ತರಗತಿಯ ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ ಆಕೆಯ ಜಡೆಯನ್ನು ಕತ್ತರಿಸುತ್ತಾನೆ. ವಿದ್ಯಾರ್ಥಿನಿ ಅಳುತ್ತಾ ಗೋಗರೆದರೂ ಅವಳತ್ತ ನೋಡದ ಶಿಕ್ಷಕ ತನ್ನ ಪಾಡಿಗೆ ತಾನು ಕೂದಲನ್ನು ಕತ್ತರಿಸುತ್ತಾನೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬುಡಕಟ್ಟು ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತೆ ರಂಜನಾ ಸಿಂಗ್ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದು, ವಿದ್ಯಾರ್ಥಿಗಳಿಂದ ಹಾಗೂ ಶಾಲೆಯ ಸಿಬ್ಬಂದಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಶಿಕ್ಷಕರ ದಿನಾಚರಣೆಯ ದಿನದಂದು ಈ ಅಮಾನವೀಯ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net