ಹಬ್ಬದ ಶುಭಾಶಯ ಕೋರಲು ಪೋನ್​ ಮಾಡಿದ್ದು ಈಕೆಯ ಪಾಲಿಗೆ ಮುಳುವಾಯ್ತು; ಗುಂಡಿಕ್ಕಿ ಕೊಂದ ಪತಿ

shootout
Published on

ಲಖನೌ: ಹಬ್ಬದ ದಿನದಂದು ಕೆಲಸ ಮಾಡದೇ ತನ್ನ ಸಹೋದರಿಯೊಂದಿಗೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬುಲಂದರ್​ಶಹರ್​ನಲ್ಲಿ ನಡೆದಿದೆ.

ಸುಶೀಲಾ (45) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಸೆಕ್ಯೂರಿಟಿ ಗಾರ್ಡ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಆರೋಪಿ ದೇವಪಾಲ್​ ವರ್ಮಾ (50) ಪೊಲೀಸರಿಗೆ ಶರಣಾಗಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸುರೇಂದ್ರನಾಥ್​ ತಿವಾರಿ, ದೀಪಾವಳಿ ಪೂಜೆಯ ಬಳಿಕ ಸುಶೀಲಾ ತನ್ನ ಸಹೋದರಿಗೆ ಹಬ್ಬದ ಶೂಭಾಶಯಗಳನ್ನು ತಿಳಿಸಲು ಕರೆ ಮಾಡಿದ್ದಾರೆ. ತುಂಬಾ ಹೊತ್ತು ಮಾತನಾಡುತ್ತಿದ್ದನ್ನು ಗಮನಿಸಿದ ಆರೋಪಿ ದೇವಪಾಲ್​ ಕುಪಿತಗೊಂಡು ತನ್ನ ಬಳಿ ಇದ್ದ ರೈಫಲ್​ನಿಂದ ಆಕೆಯ ಕತ್ತು ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಶೀಲಾ ಸ್ಥಳದಲ್ಲೇ ಮರತಪಟ್ಟಿದ್ದು, ಆರೋಪಿ ಹತ್ತಿರದ ಪೊಲೀಸ್​ ಠಾಣೆಯಲ್ಲಿ ಶರಣಾಗಿದ್ದಾನೆ.

ಘಟನೆ ನಡೆದ ವೇಳೆ ಆತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಇದಲ್ಲದೆ ಆತ ತನ್ನ ಹೆಂಡತಿಯನ್ನು ಶಂಕಿಸುತ್ತಿದ್ದ ಎಂದು ತಿಳಿದು ಬಂದಿದೆ. ದಂಪತಿಯ ಪುತ್ರ ಹಿಮಾಂಶು ನೀಡಿದ ದೂರಿನ ಮೇರೆಗೆ FIR ದಾಖಲಿಸಲಾಗಿದ್ದು, ಚಾರ್ಜ್​ಶೀಟ್​ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸುರೇಂದ್ರನಾಥ್​ ತಿವಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net