6 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

drugs
Published on

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯ ಮಾರಾಟದ ಮೇಲೆ ಕಾರ್ಯಾಚರಣೆ ಮುಂದುವರಿಸಿರುವ ಸಿಸಿಬಿ ಪೊಲೀಸರು ಸಿವಿಲ್ ಇಂಜಿನಿಯರ್ ಮತ್ತು ವಿದೇಶಿ ಪ್ರಜೆಯನ್ನು ಬಂಧಿಸಿ 6 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಬೊಮ್ಮಸಂದ್ರ ನಿವಾಸಿ ಜಿಜೋ ಪ್ರಸಾದ್ ಮತ್ತು ನೈಜೀರಿಯಾ ಪ್ರಜೆ, ಜಿಗಣಿ ನಿವಾಸಿ ಕ್ರಿಸ್ಟೋಫರ್ ಬಂಧಿತರು. ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ. ಪ್ರತ್ಯೇಕವಾಗಿ ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ಈ ಪೆಡ್ಲರ್‌ಗಳು ತೊಡಗಿದ್ದರು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಮೂಲದ ಸಿವಿಲ್ ಇಂಜಿನಿಯರ್ ಜಿಜೋ, 4 ತಿಂಗಳಿಂದ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಬೊಮ್ಮಸಂದ್ರ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ. ಕೇರಳದ ಪೆಡ್ಲರ್ ಕಡೆಯಿಂದ ಡ್ರಗ್ಸ್ ಕಡಿಮೆ ಬೆಲೆಗೆ ಖರೀದಿಸಿ ಎಲೆಕ್ಟ್ರಾನಿಕ್ಸ್ ಸಿಟಿ- ಬೊಮ್ಮಸಂದ್ರ ವ್ಯಾಪ್ತಿಯ ಐಟಿ ಉದ್ಯೋಗಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅನುಮಾನ ಬಾರದಂತೆ ಡಬಲ್ ಲೇಯರ್ ಏರ್ ಟೈಟ್ ಪ್ಲಾಸ್ಟಿಕ್ ಕವರ್‌ಗಳಲ್ಲಿ 100 ಗ್ರಾಂನಂತೆ ಸಣ್ಣ ಪೊಟ್ಟಣಗಳಲ್ಲಿ ಡ್ರಗ್ಸ್ ತುಂಬಿ ಬಿಕರಿ ಮಾಡುತ್ತಿದ್ದರು.

ನಿಗದಿತ ಸ್ಥಳದಲ್ಲಿ ಇಟ್ಟು ಅದರ ಲೊಕೇಷನ್ ಅನ್ನು ವ್ಯಸನಿಗೆ ಡ್ರಾಪ್ ಮಾಡುತ್ತಿದ್ದರು. ಆನ್‌ಲೈನ್ ಅಥವಾ ನಗದು ರೂಪದಲ್ಲಿ ಹಣ ಪಡೆಯುತ್ತಿದ್ದರು. 1 ಗ್ರಾಂ ಹೈಡ್ರೋಫೋನಿಕ್ ಗಾಂಜಾವನ್ನು 12 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಜಿಜೋನನ್ನು ಬಂಧಿಸಿ 1.050 ಕೆಜಿ ಹೈಡ್ರೋಫೋನಿಕ್ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ಫ್ಲ್ಯಾಟ್ ಮೇಲೆ ದಾಳಿ ನಡೆಸಿದಾಗ 2.454 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಒಟ್ಟಾರೆ ಆರೋಪಿಯಿಂದ 3.5 ಕೆ.ಜಿ. ಹೈಡ್ರೋಫೋನಿಕ್ ಗಾಂಜಾ, 26 ಲಕ್ಷ ರೂ. ನಗದು ಸೇರಿ 4.52 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ಪ್ರಜೆ ಬಳಿ ₹2 ಕೋಟಿ ಮೌಲ್ಯದ ಡ್ರಗ್ಸ್

ಮತ್ತೊಂದು ಕಾರ್ಯಾಚರಣೆಯಲ್ಲಿ ನೈಜೀರಿಯಾದ ಪೆಡ್ಲರ್ ಕ್ರಿಸ್ಟೋಫರ್ ಬಂಧಿಸಿದ ಪೊಲೀಸರು 2 ಕೋಟಿ ರೂ. ಮೌಲ್ಯದ 1 ಕೆ.ಜಿ. ಎಂಡಿಎಂಎ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. 2012ರಲ್ಲಿ ಬಿಜಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಈತ, ಆನೇಕಲ್ ತಾಲೂಕಿನ ಜಿಗಣಿ ಸಮೀಪ ನೆಲೆಸಿದ್ದ. ನಗರದ ಪರಿಚಿತ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸಿ 1 ಗ್ರಾಂಗೆ 20 ಸಾವಿರ ರೂ.ಗೆ ಎಂಡಿಎಂಎ ಡ್ರಗ್ಸ್ ಅನ್ನು ಮಾರುತ್ತಿದ್ದ. ಈ ಬಗ್ಗೆ ಬಾತ್ಮೀದಾರರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಭಾರತದಲ್ಲಿ ಆರೋಪಿ ನೆಲೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ) ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net