ಸಿಸಿಬಿಯಿಂದ 2.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

Drugs Free
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಮೂವರು ವಿದೇಶಿ ಪೆಡ್ಲರ್‌ಗಳು ಸೇರಿ 8ಮಂದಿ ಪೆಡ್ಲರ್‌ಗಳನ್ನು ಬಂಧಿಸಿ 2.74 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ನೈಜೀರಿಯಾದ ಅಗಸ್ಟೀನ್ ನೋನ್ಸೋ (39), ಉಡೇರಿಕೆ (34) ಮತ್ತು ಎರೆಮೇನ್ ಸ್ಮಾರ್ಟ್ (40) ಬಂಧಿತರು. 50 ಲಕ್ಷ ರೂ. ಬೆಲೆ ಬಾಳುವ ಮಾದಕ ದ್ರವ್ಯ ಜಪ್ತಿ ಮಾಡಲಾಗಿದೆ. ಜತೆಗೆ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದ್ದ 28 ಸೈಬರ್ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ವ್ಯಾಪಾರ, ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ವಾಸವಾಗಿ ಮೋಜಿನ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಗಳಿಸುವ ಉದ್ದೇಶ ಡ್ರಗ್ಸ್ ದಂಧೆಗೆ ಇಳಿದಿದ್ದರು. ಗೋವಾ, ಮುಂಬೈ, ದೆಹಲಿಯಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನು ಕಡಿಮೆ ಬೆಲೆಗೆ ಖರೀದಿಸಿ ವ್ಯಸನಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಓರ್ವ ಪೆಡ್ಲರ್‌ನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ವಿದೇಶದಲ್ಲಿ ಇರುವ ತನ್ನ ಸ್ನೇಹಿತ ಮತ್ತು ಸ್ಥಳೀಯ ಪೆಡ್ಲರ್‌ಗಳಿಂದ ಮಾದಕ ವಸ್ತು ಖರೀದಿಸಿ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ರೀತಿಯಲ್ಲಿ ಕಾಟನ್‌ಪೇಟೆ ಬಳಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಖಚಿತ ಮಾಹಿತಿಯ ಮೇಲೆ ಸ್ಥಳೀಯ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ. ಆಟೋ ಚಾಲಕನಾಗಿದ್ದ ಆರೋಪಿ, ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಡ್ರಗ್ಸ್ ದಂಧೆಗೆ ಇಳಿದಿದ್ದ. ಈತನಿಂದ 14 ಲಕ್ಷ ರೂ. ಮೌಲ್ಯದ 7 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net