

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ರಾಜಕೀಯ ಪಕ್ಷಗಳ ಮೇಲಾಟವೂ ಶುರುವಾಗಿದೆ.
ಡ್ರಗ್ಸ್ ದಂಧೆಯನ್ನು ಬುಡಸಮೇತ ಕಿತ್ತೊಗೆಯಲು ರಾಜ್ಯ ಸರ್ಕಾರ ಬದ್ಧ, ಈ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಷ್ಟೇ ಒತ್ತಡ ಬಂದರೂ ರಾಜಿ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಅಲ್ಲದೆ ಸಿಸಿಬಿ ಪೊಲೀಸರು ಕೂಡ ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಡ್ರಗ್ಸ್ ಕೇಸ್ನಲ್ಲಿ ಬರೀ ನಟಿಯರನ್ನಷ್ಟೇ ಅರೆಸ್ಟ್ ಮಾಡಿರುವ ಕುರಿತು ಅಸಮಾಧಾನವೂ ಎದ್ದಿದೆ. ಇದರ ಬೆನ್ನಲ್ಲೇ ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂ.ಗ್ರಾಮಾಂತರ ಶಾಸಕ ಡಿ.ಕೆ.ಸುರೇಶ್, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನಟಿಯರ ಹಿಂದೆ ಬಿದ್ದಿದ್ದಾರೆ. ಯಾರದೋ ಹೇಳಿಕೆ ಕೇಳಿಕೊಂಡು ಬಿಜೆಪಿ ಮತ್ತು ಪೊಲೀಸ್ ಹಣ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಡ್ರಗ್ ಸಪ್ಲೈ ಮಾಡಿಕೊಟ್ಟವರನ್ನು ಬಿಟ್ಟು ನಟಿಯರನ್ನಷ್ಟೇ ಬಂಧಿಸಿದ್ದಾರೆ. ಈ ಕೇಸ್ನಲ್ಲಿ ಮುಖ್ಯ ವ್ಯಕ್ತಿಗಳನ್ನು ಬಂಧಿಸಿಲ್ಲ. ಡ್ರಗ್ಸ್ ಮಾಫಿಯಾದಲ್ಲಿ ಪ್ರಭಾವಿ ಮಕ್ಕಳಿರುವ ಶಂಕೆ ಇದೆ. ನಟಿ ಬಾಯ್ಬಿಟ್ರೆ ಸರ್ಕಾರ ಅಲುಗಾಡಿದರೂ ಅಚ್ಚರಿ ಇಲ್ಲ ಎಂದ ಸಂಸದ ಸುರೇಶ್, ಡ್ರಗ್ಸ್ ಮಾಫಿಯಾದಲ್ಲಿ ಎಲ್ಲ ಪಕ್ಷದ ಪ್ರಭಾವಿಗಳ ಮಕ್ಕಳು, ಬಿಜಿನೆಸ್ ಮನ್ ಮಕ್ಕಳು ಇದ್ದಾರೆಂದು ಪೊಲೀಸರು ಹೆದರಿಸಿ ಅವರಿಂದ ಹಣ ವಸೂಲಿ ಮಾಡ ಹೊರಟಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.