

ಬೆಂಗಳೂರು: 'ಡ್ರಗ್ಸ್ ಮಾಫಿಯಾದಲ್ಲಿ ಬರೀ ಹೆಣ್ಮಕ್ಕಳು ಮಾತ್ರವೇ ಇರೋದಾ?' ಎಂದು ಪ್ರಶ್ನಿಸಿರುವ ನಟಿ ಪಾರುಲ್ ಯಾದವ್, 'ಪುರುಷ ಪ್ರಧಾನ ರಾಷ್ಟ್ರದಲ್ಲಿ ಇದೆಲ್ಲವೂ ಸಾರ್ಥಕವಾಯ್ತು; ಎಂದು ಕಿಡಿಕಾರಿದ್ದಾರೆ.
ಬಾಲಿವುಡ್-ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಇದುವರೆಗೂ ನಟಿಯರ ಹೆಸರಷ್ಟೇ ಪ್ರಸ್ತಾಪವಾಗುತ್ತಿದೆ. ಈಗಾಗಲೇ ಡ್ರಗ್ಸ್ ಕೇಸ್ನಲ್ಲಿ ಸ್ಯಾಂಡಲ್ವುಡ್ನ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ, ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ಈ ನಡುವೆ ಜಾಲತಾಣದಲ್ಲಿ ಪುರುಷ ವರ್ಗದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಕೇವಲ ನಟಿಯರು ಮಾತ್ರ ತಪ್ಪು ಮಾಡಿಲ್ಲ. ಅವರೊಂದಿಗೆ ನಟರೂ ಕೈಜೋಡಿಸಿದ್ದಾರೆ. ಅವರ ಹೆಸರು ಗೊತ್ತಿಲ್ಲವೇ? ಕೇವಲ ನಟಿಯರನ್ನೇ ಟಾರ್ಗೆಟ್ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗಳು ವೈರಲ್ ಆಗುತ್ತಿವೆ. ಇದಕ್ಕೆ ನಟಿ ಪಾರುಲ್ ಕೂಡ ಧ್ವನಿಗೂಡಿಸಿದ್ದು, 'ಪುರುಷ ಪ್ರಧಾನ ಸಮಾಜ ಅನ್ನೋದು ಮತ್ತೊಮ್ಮೆ ಸಾಬೀತು ಆಯ್ತು' ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
'ಡ್ರಗ್ಸ್ ಕೇಸ್ನಲ್ಲಿ ನಟ-ನಟಿಯರು ಮಾತ್ರ ಇರ್ತಾರಾ? ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಇಲ್ಲವೇ?' ಎಂದು ನಟಿ ಪಾರುಲ್ ಯಾದವ್ ಸರಣಿ ಟ್ವೀಟ್ ಮಾಡಿದ್ದಾರೆ.
'ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ?' ಎಂದು ಕೇಳಿರುವ ಪಾರುಲ್, ಕೇವಲ ಮೂವರು ನಟಿಯರು ಮಾತ್ರವೇ ಡ್ರಗ್ ಡೀಲ್ನಲ್ಲಿ ಇರೋದಾ' ಎಂದು ಪ್ರಶ್ನಿಸಿದ್ದಾರೆ.