

ಮೈಸೂರು: ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ವುಡ್ ನಂಟಿನ ಬಗ್ಗೆಯೇ ರಾಜ್ಯಾದ್ಯಾಂತ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ನಡುವೆ ಡ್ರಗ್ಸ್ ದಂಧೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮಾತನಾಡಿದ್ದಾರೆ.
ಡ್ರಗ್ಸ್ ಕೇಸ್ನಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿರುವ ನಟಿ ರಾಗಿಣಿ ದ್ವಿವೇದಿ ಈ ಹಿಂದೆ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಟಿ ರಾಗಿಣಿ ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದು ನಿಜ. ಆದರೆ ಚಿತ್ರ ನಟ-ನಟಿಯರು ಒಂದೇ ಪಕ್ಷದ ಪರ ಪ್ರಚಾರ ಮಾಡಿದ ಉದಾಹರಣೆ ಇಲ್ಲ. ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ನಟಿ ರಾಗಿಣಿ ಬಿಜೆಪಿ ಸೇರಿಲ್ಲ. ಒಂದು ವೇಳೆ ಬಿಜೆಪಿ ಬೆಂಬಲಿವಿದೆ ಎನ್ನುವುದಿದ್ದರೆ ಅವರು ಅರೆಸ್ಟ್ ಆಗುತ್ತಿರಲಿಲ್ಲ ಎಂದರು.
ಇದನ್ನೂ ಓದಿರಿ video/ ನಟಿ ಸಂಜನಾ ಬಂಧನ ಬೆನ್ನಲ್ಲೇ ವಿಡಿಯೋವೊಂದು ವೈರಲ್
ಡ್ರಗ್ಸ್ ದಂಧೆ ನಿನ್ನೆ ಮೊನ್ನೆಯದ್ದಲ್ಲ. ನೆರೆ ರಾಷ್ಟ್ರಗಳಿಂದ ಡ್ರಗ್ಸ್ ಅನ್ನು ಭಾರತಕ್ಕೆ ಸರಬರಾಜು ಮಾಡಿ ಯವಶಕ್ತಿಯನ್ನು ಕುಂದಿಸುವ ಕೆಲಸ ಮಾಡಲಾಗುತ್ತದೆ. ಆದರೆ ಈ ಮಾಫಿಯಾವನ್ನು ಹತ್ತಿಕ್ಕಲು ಹಿಂದಿನ ಯಾವ ಸರ್ಕಾರವೂ ಮುಂದಾಗಿರಲಿಲ್ಲ. ಈಗ ರಾಜ್ಯದ ಪೊಲೀಸ್ ಅಧಿಕಾರಿಗಳು ಮಾಫಿಯಾ ಹತ್ತಿಕ್ಕಲು ಮುಂದಾಗಿದ್ದಾರೆ. ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಸರ್ಕಾರ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಶ್ರಮಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ, ಯಾವುದೇ ಪ್ರಭಾವಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ. ಈ ಕೇಸ್ನಲ್ಲಿ ಯಾರೇ ಇದ್ದರೂ ಅವರಿಗೆ ಕ್ಷಮೆ ಇಲ್ಲ ಎಂದು ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.