

ನವದೆಹಲಿ: ಇತ್ತಿಚೆಗೆ ಕೈಗೊಳ್ಳಲಾಗಿದ್ದ ಸಂಶೋಧನೆಯಲ್ಲಿ ಅಜೀರ್ಣತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗಾಗಿ ಬಳಸುವ ಮದ್ದು, ಕರೊನಾ ಸೋಂಕನ್ನು ಪರಿಣಾಮಕಾರಿಯಾಗಿ ಗುಣಪಡಿಸಿದೆ ಎಂಬುದು ಖಚಿತಪಟ್ಟಿದೆ.
ಸಂಶೋಧಕರ ಪ್ರಕಾರ ಅರ್ಜೀಣತೆ ಸಮಸ್ಯೆ ನಿವಾರಣೆಗೆ ಕೊಡುವ ಫ್ಯಾಮೋಟಿಡೀನ್ (Famotidine) ಮಾತ್ರೆ ಕೊಟ್ಟಾದ ನಂತರದಲ್ಲಿ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರ ಸ್ಥಿತಿ ಉತ್ತಮಗೊಂಡಿದ್ದಾಗಿ ಹೇಳಲಾಗಿದೆ.
ವೈದ್ಯಕೀಯ ಜರ್ನಲ್ ಗಟ್ನಲ್ಲಿ ಪ್ರಕಟವಾಗಿರುವ ಈ ಮಹಾಪ್ರಬಂಧದ ಪ್ರಕಾರ ಹೋಂ ಕ್ವಾರಂಟೈನ್ನಲ್ಲಿ ಇರುವವರಿಗೆ ಈ ಮಾತ್ರೆಯನ್ನು ಕೊಟ್ಟರೆ, ಕರೋನಾ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಅಜೀರ್ಣತೆಯ ಸಮಸ್ಯೆಯನ್ನು ಪರಿಹರಿಸಲು ಫ್ಯಾಮೋಟಿಡೀನ್ ಮಾತ್ರೆಯನ್ನು ಕೊಡಲಾಗುತ್ತದೆ. ಸಮಸ್ಯೆಯ ತೀವ್ರತೆಯನ್ನು ಆಧರಿಸಿ 20ರಿಂದ 160 ಎಂ.ಜಿ.ವರೆಗಿನ ಮಾತ್ರೆಯನ್ನು ದಿನದಲ್ಲಿ ನಾಲ್ಕು ಬಾರಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ವಿಶೇಷವಾಗಿ ಹುಳಿತೇಗು ಮತ್ತು ಎದೆಉರಿತದಂಥ ಸಮಸ್ಯೆಯನ್ನೂ ನಿಯಂತ್ರಿಸಲು ಇದು ಉತ್ತಮ ಮದ್ದಾಗಿದೆ.
ಈ ಮದ್ದಿನ ಪರೀಕ್ಷೆಗಾಗಿ ಅಮೆರಿಕದ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೋರೇಟರಿ ಕ್ಯಾನ್ಸರ್ ಸೆಂಟರ್ ಕರೊನಾ ಸೋಂಕಿಗೆ ತುತ್ತಾಗಿದ್ದ 10 ಮಂದಿಯನ್ನು (6 ಪುರುಷರು, ನಾಲ್ವರು ಮಹಿಳೆಯರು) ಆಯ್ಕೆ ಮಾಡಿಕೊಂಡಿದ್ದರು.
ಕೆಮ್ಮು, ಉಸಿರಾಟದ ಸಮಸ್ಯೆ, ಸುಸ್ತು, ತಲೆನೋವು ಮತ್ತು ರುಚಿ ಹಾಗೂ ವಾಸನೆ ಗ್ರಹಣ ಶಕ್ತಿ ಕುಂದಿದ್ದವರನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಇವರೆಲ್ಲರಿಗೂ 11 ದಿನಗಳ ಕಾಲ ದಿನಕ್ಕೆ 3 ಬಾರಿಯಂತೆ 80 ಎಂ.ಜಿ. ಫ್ಯಾಮೋಟಿಡೀನ್ ಮಾತ್ರೆಗಳನ್ನು ಕೊಡಲಾಯಿತು. ಈ ಮಾತ್ರೆಯನ್ನು ಸೇವಿಸಿದ ಎಲ್ಲ 10 ಮಂದಿ 24ರಿಂದ 48 ಗಂಟೆಗಳ ಒಳಗೆ ತಮ್ಮ ದೇಹದ ಸ್ಥಿತಿ ಸುಧಾರಿಸಲು ಆರಂಭವಾಯಿತು. 14ನೇ ದಿನದ ವೇಳೆಗೆ ಎಲ್ಲವೂ ಗುಣವಾಗಿದ್ದವು ಎಂದು ಹೇಳಿದ್ದಾಗಿ ಸಂಶೋಧಕರು ತಿಳಿಸಿದ್ದಾರೆ. ಈ ಔಷಧವು ಹೊಟ್ಟೆಯಲ್ಲಿ ಬಿಡುಗಡೆಯಾಗುವ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡಿತ್ತು ಎಂದು ವಿವರಿಸಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಫ್ಯಾಮೋಟಿಡೀನ್ ಮಾತ್ರೆ ಕರೊನಾ ಸೋಂಕನ್ನು ಗುಣಪಡಿಸಿದೆ ಅಂದ ಮಾತ್ರಕ್ಕೆ ಕೋವಿಡ್ ಚಿಕಿತ್ಸೆಯಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಬಹುದು ಎಂಬುದು ಅರ್ಥವಲ್ಲ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.