

ಬಳ್ಳಾರಿ: ತಂದೆಯ ಪ್ರೀತಿ ಕಾಣದ 3 ವರ್ಷದ ಬಾಲಕಿಗೆ ತಾಯಿ ಮತ್ತು ಆಕೆಯ ಪ್ರಿಯಕರ ವಿಲನ್ಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರಿಯತಮನೊಂದಿಗೆ ಸೇರಿ ಬಾಲಕಿಯನ್ನು ಕೊಲ್ಲಲ್ಲು ಯತ್ನಿಸಿದ್ದಲ್ಲದೇ ಸಿಗರೇಟ್‌ನಿಂದ ಬಾಲಕಿಯ ಮೈ ಸೇರಿದಂತೆ ಗುಪ್ತಾಂಗಕ್ಕೆ ಗಾಯ ಮಾಡಿರುವ ಪ್ರಕರಣ ಗಣಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸಿರಗುಪ್ಪ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಂದೆ ಪ್ರೀತಿ ಕಾಣದ ಬಾಲಕಿಗೆ ಆಸರೆಯಾಗಬೇಕಾದ ತಾಯಿಯೊಬ್ಬಳು ಆರೈಕೆ ಮಾಡದೇ ತನ್ನ ಮಗಳನ್ನೇ ದೂರ ತಳ್ಳಲು ಪ್ರಯತ್ನಿಸಿದ್ದಾಳೆ. ಪ್ರಿಯತಮನೊಂದಿಗೆ ಸೇರಿ 3 ವರ್ಷದ ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದಾಳೆ. ಪ್ರಮುಖವಾಗಿ ಆಕೆಯ ಪ್ರಿಯತಮ ಬಾಲಕಿಯ ಗುಪ್ತಾಂಗ ಸೇರಿ ವಿವಿಧ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದಾನೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಬಾಲಕಿಯರಿಗೆ ರಕ್ಷಣೆ ಯಾವಾಗ..?: ದುರಂತವೆಂದರೇ ಸಿರಗುಪ್ಪ ಪಟ್ಟಣದಲ್ಲು ತಂದೆಯೇ ಮಕ್ಕಳಿಗೆ ವಿಲನ್ ಆದ ಘಟನೆ ನಡೆದ ೧೫ ದಿನದಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ. ಲಾಕ್‌ಡೌನ್ ವೇಳೆ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಅಧಿಕವಾಗಿತ್ತು.ಅದರ ಜತೆಗೆ ಪೋಕ್ಸೋ, ದೌರ್ಜನ್ಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿರುವ ಮಾಹಿತಿ ಹೊರಬಿದ್ದಿದೆ.ಈ ಮೂರು ಪ್ರಕರಣಗಳು ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿಯೇ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಮಗುವನ್ನೂ ಬಳ್ಳಾರಿ ನಗರದ ಶಾಂತಿಧಾಮದಲ್ಲಿ ಉಳಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.