

ನವದೆಹಲಿ: ದೇಶದ ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಬಗ್ಗೆ ಸುಪ್ರೀಂ ಕೋರ್ಟ್(Supreme Court) ಸೋಮವಾರ(ಡಿಸೆಂಬರ್ 16) ತೀವ್ರ ಕಳವಳ ವ್ಯಕ್ತಪಡಿಸಿದೆ. ಡ್ರಗ್ಸ್ ಸೇವನೆಯು 'ಕೂಲ್' ಅಲ್ಲ ಎಂದು ಯುವಕರಿಗೆ ಎಚ್ಚರಿಕೆ ನೀಡಿದೆ.
ಮಾದಕವಸ್ತು ಕಳ್ಳಸಾಗಣೆ ಆರೋಪಿ ಅಂಕುಶ್ ವಿಪನ್ ಕಪೂರ್ ವಿರುದ್ಧದ ಎನ್‌ಐಎ ತನಿಖೆಯನ್ನು ಅನುಮೋದಿಸಿದ ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಮೇಲಿನ ಹೇಳಿಕೆಗಳನ್ನು ನೀಡಿದೆ. ಅಂಕುಶ್ ವಿರುದ್ಧ ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಹೆರಾಯಿನ್ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪವಿದೆ.
ಮಾದಕ ದ್ರವ್ಯ ಸೇವನೆಯಿಂದ ಸಾಮಾಜಿಕ ಮತ್ತು ಆರ್ಥಿಕ ಅಪಾಯಗಳ ಜತೆಗೆ ಮಾನಸಿಕ ಅಪಾಯಗಳೂ ಇವೆ. ಇದರಿಂದ ದೇಶದ ಯುವಕರು ತಮ್ಮ ಬುದ್ಧಿಶಕ್ತಿಯನ್ನು ಕಳೆದುಕೊಳ್ಳಬಹುದು. ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ವಿರುದ್ಧ ತಕ್ಷಣವೇ ಸಾಮೂಹಿಕ ಕ್ರಮಕೈಗೊಳ್ಳುವಂತೆ ಪೀಠ ಸೂಚಿಸಿದೆ. ಈ ಸಮಸ್ಯೆಯ ವಿರುದ್ಧ ಪಾಲಕರು, ಸಮಾಜ ಮತ್ತು ಸರ್ಕಾರಗಳು ಒಟ್ಟಾಗಿ ಹೋರಾಡುವಂತೆ ನ್ಯಾಯಾಲಯ ಕೇಳಿದೆ.
ಮಾದಕ ದ್ರವ್ಯಗಳ ಪ್ರಭಾವವು ವಯಸ್ಸು, ಜಾತಿ ಮತ್ತು ಧರ್ಮವನ್ನು ಮೀರಿದೆ. ಇದು ಇಡೀ ಸಮಾಜ ಮತ್ತು ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಪೀಠ ಹೇಳಿದೆ. ಮಾದಕವಸ್ತುಗಳಿಂದ ಬರುವ ಆದಾಯವು ಭಯೋತ್ಪಾದನೆ ಮತ್ತು ಸಮಾಜದ ಅಸ್ಥಿರತೆಗೆ ಹಣವನ್ನು ನೀಡುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
ಈ ಗಂಭೀರ ಬೆದರಿಕೆಯ ವಿರುದ್ಧ ಎಲ್ಲರೂ ಒಂದಾಗಬೇಕು. ವಿಶೇಷವಾಗಿ ಯುವಕರು ಈ ಸವಾಲನ್ನು ಎದುರಿಸಲು ಪ್ರಯತ್ನಿಸಬೇಕು. ಮಾದಕ ವ್ಯಸನಿಯನ್ನು ಸಹಾನುಭೂತಿ ಮತ್ತು ಪ್ರೀತಿಯಿಂದ ನಡೆಸಿಕೊಳ್ಳುವ ಅಗತ್ಯವಿದೆ ಎಂದು ಪೀಠ ಹೇಳಿದೆ. ಮಾದಕ ದ್ರವ್ಯ ಕಳ್ಳಸಾಗಣೆದಾರರ ಗಳಿಕೆಯ ಮೇಲೆ ದಾಳಿ ನಡೆಸುವ ಅಗತ್ಯವಿದೆ. ಮಾದಕ ವಸ್ತುಗಳ ವೈಭವೀಕರಣವನ್ನು ನಿಲ್ಲಿಸಬೇಕು ಮತ್ತು ಅದರ ಅಪಾಯಗಳ ಬಗ್ಗೆ ಯುವಜನರಿಗೆ ಅರಿವು ಮೂಡಿಸಬೇಕು ಎಂದು ಪೀಠವು ತಿಳಿಸಿದೆ.(ಏಜೆನ್ಸೀಸ್)