ಡ್ರೋನ್‌ ಪ್ರತಾಪ್‌ ಎಲ್ಲಿದ್ದಾನೆಂದು ಕೊನೆಗೂ ಕಂಡುಹಿಡಿದ ಪೊಲೀಸರು!

dron prataph
Published on

ಬೆಂಗಳೂರು: ವಿಜ್ಞಾನಿ ಎಂದು ಹೇಳಿಕೊಂಡು, ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳನ್ನು, ಮಾಧ್ಯಮಗಳನ್ನು ಯಾಮಾರಿಸಿ ತಲೆಮರೆಸಿಕೊಂಡಿದ್ದ ಮಂಡ್ಯದ ಯುವಕ ಡ್ರೋನ್‌ ಪ್ರತಾಪ್‌ ಎಲ್ಲಿದ್ದಾನೆ ಎಂದು ಕೊನೆಗೂ ಪೊಲೀಸರು ಕಂಡುಹಿಡಿದಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿ ನಿಯಮದ ಪ್ರಕಾರ, ಕ್ವಾರಂಟೈನ್​ನಲ್ಲಿರಬೇಕಿದ್ದ ಪ್ರತಾಪ್, ಎಲ್ಲ ನಿಯಮಗಳನ್ನು ಮೀರಿ ಖಾಸಗಿ ಚಾನೆಲ್‌ ಒಂದಕ್ಕೆ ಸಂದರ್ಶನ ಕೊಡಲು ಹೋಗಿ ಪೇಚಿಗೆ ಸಿಲುಕಿದ್ದ. ನಂತರ ಪೊಲೀಸರು ಎಲ್ಲಿ ಹುಡುಕಿದರೂ ಆತ ಸಿಕ್ಕಿರಲಿಲ್ಲ.

ಈತನ ವಿರುದ್ಧ ಇದಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಅಷ್ಟೇ ಅಲ್ಲದೇ, ಜರ್ಮನಿಯ ಡ್ರೋನ್‌ ಕಂಪನಿ ತಯಾರು ಮಾಡಿರುವ ಡ್ರೋನ್‌ ತಾನೇ ತಯಾರು ಮಾಡಿರುವುದಾಗಿ ಹೇಳಿಕೊಂಡಿದ್ದರಿಂದ ಆ ಕಂಪನಿ ಕೂಡ ಈತನ ವಿರುದ್ಧ ಮೊಕದ್ದಮೆ ಹೂಡಲು ರೆಡಿ ಮಾಡಿದೆ.

ಈ ನಡುವೆಯೇ, ಪ್ರತಾಪ್‌ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ. ಪೊಲೀಸರ ತಂಡ ಇದೀಗ ಈತನನ್ನು ಮೈಸೂರಿನಲ್ಲಿ ಪತ್ತೆ ಮಾಡಿದೆ. ಈತನ ಮೊಬೈಲ್‌ ಕರೆಗಳನ್ನು ಟ್ರ್ಯಾಕ್‌ ಮಾಡುವ ಮೂಲಕ ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದರು. ಇದೀಗ ಆತ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಗೊತ್ತಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ಈತನನ್ನು ಕರೆ ತರಲು ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಮೈಸೂರಿಗೆ ತೆರಳಿದ್ದಾರೆ. ವಾಪಸ್‌ ಕರೆತಂದ ಬಳಿಕ ಬೆಂಗಳೂರಿನಲ್ಲಿ ಈತನನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಆದರೆ, ಡ್ರೋನ್ ಪ್ರತಾಪ್ ತಾನು ಮೈಸೂರಿನಲ್ಲೇ ಕ್ವಾರಂಟೈನ್​ನಲ್ಲಿ ಇರುತ್ತೇನೆಂದು ಹೇಳುತ್ತಿದ್ದಾನೆ ಎಂದೂ ಹೇಳಲಾಗಿದೆ.

ಜುಲೈ 15ರಂದು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದ. ಇದು ಕ್ವಾರಂಟೈನ್ ನಿಯಮಗಳ ಉಲ್ಲಂಘನೆಯಾಗಿದೆ ಎಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದರು. ಅದಾದ ಬಳಿಕ ಡ್ರೋನ್ ಪ್ರತಾಪ್ ನಾಪತ್ತೆಯಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net