ಅಕ್ರಮ ಗಣಿ ಪತ್ತೆಗೆ ಡ್ರೋನ್: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿದ್ಧತೆ; ಶೀಘ್ರ ಸರ್ಕಾರದಿಂದ ಅನುಮತಿ ನಿರೀಕ್ಷೆ

Drone
Published on

| ಹರೀಶ್ ಬೇಲೂರು ಬೆಂಗಳೂರು

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿರುವ ಗಣಿ ಗುತ್ತಿಗೆದಾರರರು ಇನ್ಮುಂದೆ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿದರೆ ಸಿಕ್ಕಿಬೀಳೋದು ಪಕ್ಕಾ!

ಹೌದು. ಅಕ್ರಮ ಗಣಿಗಾರಿಕೆ ತಡೆಯಲು ರಾಜ್ಯಾದ್ಯಂತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡ್ರೋನ್ ಸರ್ವೆ ನಡೆಸಲಿದೆ. ಇದಕ್ಕೆ ಬೇಕಾದ ರೂಪುರೇಷಗಳನ್ನು ಸಿದ್ಧಪಡಿಸಿಕೊಂಡಿರುವ ಇಲಾಖೆ, ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರದಲ್ಲೇ ಡ್ರೋನ್ ಸರ್ವೆಗೆ ಅನುಮೋದನೆ ಸಿಗುವ ನಿರೀಕ್ಷೆಯೂ ಇದೆ. ಸರ್ಕಾರದ ಅಧೀನ ಸಂಸ್ಥೆಯಾದ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (ಕೆಎಸ್​ಆರ್​ಎಸ್​ಎಸಿ) ಮೂಲಕ ಇಲಾಖೆ ಸರ್ವೆ ಕಾರ್ಯ ನಡೆಸಲಿದೆ. ಇದರಿಂದ ರಾಜ್ಯದಲ್ಲಿ ಯಾವ ಮೂಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದರೂ ಮಾಹಿತಿ ಸಿಗಲಿದೆ. ಇದರ ಆಧಾರದ ಮೇಲೆ ಬಿಗಿ ಕ್ರಮಕೈಗೊಳ್ಳಲು ಸಹಕಾರಿಯಾಗಲಿದೆ.

ಈ ಹಿಂದೆ ಮ್ಯಾನುವಲ್ ಮೂಲಕ ಸರ್ವೆ ಮಾಡಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತಿತ್ತು. 5 ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆಯುವ ಗುತ್ತಿಗೆದಾರರು, ಹತ್ತಾರು ಎಕರೆಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಒಂದು ವರ್ಷದಲ್ಲಿ ಇಷ್ಟೇ ಪ್ರಮಾಣದಲ್ಲಿ ಕಲ್ಲು, ಅದಿರು, ಮರಳು ಸೇರಿ ಖನಿಜ ಮತ್ತು ಉಪ ಖನಿಜಗಳನ್ನು ತೆಗೆಯಬೇಕೆಂಬ ನಿಯಮ ವಿಧಿಸಲಾಗಿದ್ದರೂ ಯದ್ವಾತದ್ವಾ ಗಣಿಗಾರಿಕೆ ನಡೆಸುವ ಮೂಲಕ ಗಣಿಗುತ್ತಿಗೆದಾರರು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಜತೆಗೆ, ಸರ್ಕಾರಕ್ಕೆ ಸರಿಯಾಗಿ ರಾಯಲ್ಟಿ ಕಟ್ಟದೆ ಕೋಟ್ಯಂತರ ರೂಪಾಯಿ ವಂಚಿಸಲಾಗುತ್ತಿದೆ. ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿರುವ ಗುತ್ತಿಗೆದಾರರು ಸರಿಯಾಗಿ ನವೀಕರಣವನ್ನೂ ಮಾಡಿಸಿಕೊಳ್ಳುತ್ತಿಲ್ಲ. ಹೀಗಾಗಿ, ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಇಲಾಖೆಯ ಡ್ರೋನ್ ಸರ್ವೆ ಪ್ರಮುಖ ಪಾತ್ರವಹಿಸಲಿದೆ.

ಡ್ರೋನ್ ಸರ್ವೆ ಅನುಕೂಲಗಳು

  • ಎಲ್ಲ ಮಾದರಿಯ ಅಕ್ರಮ ಗಣಿಗಾರಿಕೆಗೆ ಕಡಿವಾಣ
  • ಅಕ್ರಮ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲು ಸುಲಭ
  • ನಿಗದಿಪಡಿಸಿದ ಜಾಗದಲ್ಲೇ ಗಣಿಗಾರಿಕೆ ನಡೆಸಬೇಕು
  • ಸರ್ಕಾರಕ್ಕೆ ರಾಯಲ್ಟಿ ವಂಚಿಸಲು ಆಗುವುದಿಲ್ಲ
  • ಯಾವುದು ಅನಧಿಕೃತ, ಅಧಿಕೃತ ಎಂಬುದು ಪತ್ತೆ
  • ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲೇ ಕಲ್ಲು,
  • ಮರಳು ತೆಗೆಯಲು ಕಡಿವಾಣ.

17,386 ಪ್ರಕರಣ ದಾಖಲು: ಇಲಾಖೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಸಂಬಂಧ ರಾಜ್ಯಾದ್ಯಂತ 2014-15ರಿಂದ 2020-21ರವರೆಗೆ 17,386 ಪ್ರಕರಣ ದಾಖಲಾಗಿದೆ. ಜತೆಗೆ, 1,842 ಎಫ್​ಐಆರ್ ಹಾಗೂ 146 ಕೋಟಿ ರೂ. ದಂಡ ಹಾಕಲಾಗಿದೆ. 2014-15ರಲ್ಲಿ 4,017, 2015-16ರಲ್ಲಿ 3,285, 2016-17ರಲ್ಲಿ 2,953, 2017-18ರಲ್ಲಿ 2,000, 2018-19ರಲ್ಲಿ 1,196, 2019-20ರಲ್ಲಿ 900 ಹಾಗೂ 2020-21ರಲ್ಲಿ 3,035 ಸೇರಿ ಒಟ್ಟಾರೆ 17,386 ಪ್ರಕರಣ ದಾಖಲಾಗಿವೆ. ಅರಣ್ಯ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿ ಕಲ್ಲುಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸಾಧ್ಯವಾಗಿಲ್ಲ. ಇಂತಿಷ್ಟು ಸಾವಿರ ಎಂದು ದಂಡ ಕಟ್ಟುವ ಮಾಲೀಕರು ಮತ್ತೆ ಕಲ್ಲು ಗಣಿಗಾರಿಕೆ ಮುಂದುವರಿಸುತ್ತಾರೆ. ಆರೋಪಿಗಳಿಗೆ ಜೈಲು ಶಿಕ್ಷೆ ಎಂಬುದು ಇಲ್ಲ.

13 ಸಾವಿರ ಎಕರೆಯಲ್ಲಿ ಗಣಿಗಾರಿಕೆ: ಗಣಿಗಾರಿಕೆಗೆ ಅರಣ್ಯ ಸಂರಕ್ಷಣೆ ಕಾಯ್ದೆ 1980 2(1)ಮತ್ತು 2(3) ಹಾಗೂ ಅರಣ್ಯ ಸಂರಕ್ಷಣಾ ಕಾನೂನು 2003(6) ಹಾಗೂ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆದ ಬಳಿಕ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ(20 ವರ್ಷ ಗುತ್ತಿಗೆ) ಹಾಗೂ ನಿರ್ದಿಷ್ಟವಲ್ಲದ (30 ವರ್ಷ ಗುತ್ತಿಗೆ) ಎಂದು 2 ವಿಧದಲ್ಲಿ ಅನುಮತಿ ನೀಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಅಂದಾಜು 13 ಸಾವಿರ ಎಕರೆ ಪ್ರದೇಶದಲ್ಲಿ ಗುತ್ತಿಗೆ ಆಧಾರದಲ್ಲಿ 2,802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ.

ಎಲ್ಲಿ ಹೆಚ್ಚು?: ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಶಿವಮೊಗ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಬಳ್ಳಾರಿ, ತುಮಕೂರು ಮತ್ತು ವಿಜಯಪುರ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಈ ಜಿಲ್ಲೆಗಳಲ್ಲಿ ಪ್ರತಿ ವರ್ಷ ಅಕ್ರಮ ಗಣಿಗಾರಿಕೆ, ಸಾಗಾಟ ಹಾಗೂ ದಾಸ್ತಾನು ಸಂಬಂಧ ನೂರಾರು ಪ್ರಕರಣ ದಾಖಲಾಗುತ್ತಿವೆ. ಅಲ್ಲದೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಹಾಗೂ ಅವರ ಬೆಂಬಲಿಗರು ಈ ದಂಧೆ ನಡೆಸುತ್ತಿದ್ದಾರೆ.

ಒನ್ ಸ್ಟೇಟ್ ಒನ್ ಜಿಪಿಎಸ್!

ಅಕ್ರಮ ಗಣಿಗಾರಿಕೆ ತಡೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ‘ಒನ್ ಸ್ಟೇಟ್ ಒನ್ ಜಿಪಿಎಸ್’ ಯೋಜನೆ ಜಾರಿಗೆ ತರಲು ಸಿದ್ಧತೆಯನ್ನೂ ನಡೆಸಿದೆ. ಯೋಜನೆ ಅನುಷ್ಠಾನಕ್ಕೆ ಈಗಾಗಲೆ ಇಲಾಖೆ, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸರ್ಕಾರದಿಂದ ಅನುಮೋದನೆಗೆ ಕಾಯುತ್ತಿದ್ದು, ಶೀಘ್ರದಲ್ಲೇ ಅದಿರು, ಕಲ್ಲು ಮತ್ತು ಮರಳು ಸೇರಿ ಎಲ್ಲ ಮಾದರಿಯ ಖನಿಜಗಳನ್ನು ಸಾಗಿಸುವ ಲಾರಿಗಳಿಗೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅಳವಡಿಸುವ ಕಾರ್ಯ ಶುರು ಮಾಡಲಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈಗಾಗಲೆ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಆದರೆ, ಸುಧಾರಿತ ತಂತ್ರಜ್ಞಾನ ವ್ಯವಸ್ಥೆ ಮತ್ತು ನಿರ್ವಹಣೆ ಇಲ್ಲದಿರುವುದು ಹಾಗೂ ಕೆಲ ಲೋಪದೋಷಗಳಿಂದ ಅಕ್ರಮ ನಡೆಸುವವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಕೆಲ ಲಾರಿಗಳಿಗೆ ಅಳವಡಿಸಿರುವ ಜಿಪಿಎಸ್ ಅನ್ನು ತೆಗೆದು ಮಾಲೀಕರು ಖನಿಜ ಸಾಗಾಣೆ ಮಾಡುತ್ತಿರುವ ಬಗ್ಗೆ ನಿರಂತರ ದೂರುಗಳು ದಾಖಲಾಗುತ್ತಿವೆ. ಹಾಗಾಗಿ, ಇಲಾಖೆಯ ಇಂಟಿಗ್ರೇಟೆಡ್ ಲೀಸ್ ಮ್ಯಾನೇಜ್​ವೆುಂಟ್ ಸಿಸ್ಡಂನಡಿ ಎಲ್ಲ ಮಾದರಿಯ ಖನಿಜ ಸಾಗಿಸಲು ನೋಂದಣಿಯಾಗಿರುವ ಅಂದಾಜು 2 ಲಕ್ಷ ಲಾರಿಗಳಿಗೆ ಯೋಜನೆಯಡಿ ಸುಧಾರಿತ ತಂತ್ರಜ್ಞಾನದ ಮೂಲಕ ಜಿಪಿಎಸ್ ಅಳವಡಿಸಿದರೆ ಅಕ್ರಮಗಳಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net