

ಬೆಂಗಳೂರು: ರಾಜ್ಯದ ಹೆದ್ದಾರಿಯಲ್ಲಿ 130 ಕಿ.ಮೀಟರ್‌ಗಿಂತ ವೇಗವಾಗಿ ವಾಹನ ಚಲಾಯಿಸಿದ ಚಾಲಕ/ ಸವಾರರ ವಿರುದ್ಧ 33 ಪ್ರಕರಣಗಳು ದಾಖಲಾಗಿವೆ.
ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಅತೀ ವೇಗದ ಚಾಲನೆ ಮತ್ತು ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವರ ವಿರುದ್ಧ ಆಗಸ್ಟ್ 1 ರಿಂದ ಎ್ಐಆರ್ ದಾಖಲಿಸುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ರಸ್ತೆ ಸುರಕ್ಷತೆ ಮತ್ತು ಸಂಚಾರ) ಅಲೋಕ್ ಕುಮಾರ್ ಸೂಚನೆ ನೀಡಿದ್ದರು. ಗುರುವಾರ 130 ಕಿ.ಮೀಗಿಂತಲೂ ವೇಗವಾಗಿ ಸಂಚರಿಸುವ ವಾಹನಗಳ ಚಾಲಕ/ಸವಾರರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ವೇಗಮಿತಿ ಉಲ್ಲಂಘಿಸಿದ 33 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಬೆಂಗಳೂರು - ಮೈಸೂರು ರಸ್ತೆ ಮಾರ್ಗದಲ್ಲಿನ ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಎಎನ್‌ಪಿಆರ್ ಕ್ಯಾಮರಾಗಳಿಲ್ಲ. ಆದರೂ ಸ್ಪೀಡ್ ಗನ್ ಮೂಲಕ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಗತ್ಯವಾಗಿ ಹೈ ಬೀಮ್ ಎಲ್ಇಡಿ ಹೆಡ್‌ಲೈಟ್ ಬಳಸುವ ವಾಹನಗಳ ವಿರುದ್ಧ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ರಸ್ತೆ ಸುರಕ್ಷಾತಾ ಅಧಿನಿಯಮ ಉಲ್ಲಂಘಿಸಿ ಅನಾವಶ್ಯಕ ಹೈ ಬೀಮ್ ಲೈಟ್ ಬಳಸುವವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು ಜುಲೈನಲ್ಲಿ ರಾಜ್ಯದಲ್ಲಿ 28,620 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆ ಪೈಕಿ ಬೆಂಗಳೂರು ನಗರದಲ್ಲಿ (9046) ಹಾಗೂ ಮಂಗಳೂರು ನಗರದಲ್ಲಿ (1365) ಹೆಚ್ಚು ದಾಖಲಾಗಿವೆ.