

ಬೆಂಗಳೂರು: ಪೂರ್ವಸಿದ್ಧತೆ ಇಲ್ಲದೆ ಫೇಸ್ಲೆಸ್ ವ್ಯವಸ್ಥೆ ಜಾರಿಗೆ ತಂದು ಎಟ್ಟುವಟ್ಟು ಮಾಡಿದ್ದ ಸಾರಿಗೆ ಇಲಾಖೆ, ಇದೀಗ ರಾತ್ರೋರಾತ್ರಿ ಚಾಲನಾ ಪರವಾನಗಿ (ಡಿಎಲ್) ಪಡೆಯುವ ವ್ಯವಸ್ಥೆ ಬದಲಾಯಿಸುವ ಜತೆಗೆ ಶುಲ್ಕ ಏರಿಕೆ ಮಾಡಿ ಜನರಿಗೆ ಶಾಕ್ ಕೊಟ್ಟಿದೆ. ದಿಢೀರ್ ಆದೇಶದಿಂದಾಗಿ ಗುರುವಾರ ರಾಜ್ಯಾದ್ಯಂತ ಡಿಎಲ್ ಪಡೆಯಲು ಆಕಾಂಕ್ಷಿತರು ಪರದಾಡಬೇಕಾಯಿತು. ಈ ವಿಚಾರದಲ್ಲಿ ಆರ್ಟಿಒ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿವೆ.
ಈವರೆಗೆ ಹೊಸ ಡಿಎಲ್ ಪಡೆಯಲು 845 ರೂ. ಹಾಗೂ ಡಿಎಲ್ ನವೀಕರಣಕ್ಕೆ 545 ರೂ. ಪಾವತಿಸಬೇಕಿತ್ತು. ಆದರೀಗ ಹೊಸ ಆದೇಶದ ಪ್ರಕಾರ ಹೊಸ ಡಿಎಲ್ಗೆ 1,166 ರೂ. 82 ಪೈಸೆ ಪಾವತಿಸಬೇಕಿದ್ದು, 321 ರೂ. 82 ಪೈಸೆ ಹೆಚ್ಚಳವಾಗಿದೆ. ಡಿಎಲ್ ಸ್ಮಾರ್ಟ್ಕಾರ್ಡ್ ವಿತರಣೆಗೆ 195 ರೂ. ಪಡೆಯಲಾಗುತ್ತಿತ್ತು. ಇದರಲ್ಲಿ 137 ರೂ. ಸರ್ಕಾರಕ್ಕೆ ಹಾಗೂ 58 ರೂ. ಸ್ಮಾರ್ಟ್ಕಾರ್ಡ್ ಪೂರೈಸುವ ಗುತ್ತಿಗೆ ಪಡೆದಿರುವ ರೋಸ್ವುರ್ಟಾ ಕಂಪನಿಗೆ ಹೋಗುತ್ತಿತ್ತು. ಆದರೀಗ ರೋಸ್ವುರ್ಟಾ ಪಡೆಯುತ್ತಿದ್ದ ಸ್ಮಾರ್ಟ್ಕಾರ್ಡ್ ಹಣವನ್ನು ನೇರವಾಗಿ ಸರ್ಕಾರವೇ ಸ್ವೀಕರಿಸಲು ನಿರ್ಧರಿಸಿದೆ.
ಡಿಎಲ್ಗೆ ಅರ್ಜಿ ಹಾಕುವ ವ್ಯಕ್ತಿಯ ಭಾವಚಿತ್ರ ಹಾಗೂ ಬಯೋಮೆಟ್ರಿಕ್ ವಿವರವನ್ನು ರೋಸ್ವುರ್ಟಾ ಕಂಪನಿಯೇ ಸಂಗ್ರಹಿಸಿ, ಸ್ಮಾರ್ಟ್ಕಾರ್ಡ್ ಮುದ್ರಿಸಿ ಕೊಡುತ್ತಿತ್ತು. ಇದಕ್ಕಾಗಿ 58 ರೂ. ಪಡೆಯುತ್ತಿತ್ತು. ಈಗ ಸರ್ಕಾರವೇ ನೇರವಾಗಿ ಹಣ ಸ್ವೀಕರಿಸುವ ತೀರ್ಮಾನ ತೆಗೆದುಕೊಂಡಿರುವುದರಿಂದ ರೋಸ್ವುರ್ಟಾ ಕಂಪನಿ, ಗುರುವಾರ ಭಾವಚಿತ್ರ ಮತ್ತು ಬಯೋಮೆಟ್ರಿಕ್ ವಿವರ ಸಂಗ್ರಹಿಸುವುದನ್ನು ನಿಲ್ಲಿಸಿದೆ. ಇದರಿಂದ ಡಿಎಲ್ ವಿತರಣೆ ಪ್ರಕ್ರಿಯೆ ಸ್ಥಗಿತಗೊಂಡು ಅಧಿಕಾರಿಗಳು ಹಾಗೂ ಜನ ಪರದಾಡಿದರು.
ಪೋಸ್ಟಲ್ ಶುಲ್ಕ 100 ರೂ.!: ಅರ್ಜಿದಾರನ ಮನೆಗೇ ಡಿಎಲ್ ಕಳುಹಿಸಲು ಹೊಸದಾಗಿ ಅಂಚೆ ಶುಲ್ಕ 100 ರೂ. ವಿಧಿಸಲಾಗಿದೆ. ಈವರೆಗೆ ಡಿಎಲ್ಗೆ ಅರ್ಜಿ ಹಾಕುವ ಸಂದರ್ಭದಲ್ಲೇ ಅರ್ಜಿದಾರನಿಂದ 21 ರೂ.ನ ಸ್ಟಾಂಪ್ ಪಡೆದು, ನಂತರ ಪೋಸ್ಟ್ನಲ್ಲಿ ಕಾರ್ಡ್ ಕಳುಹಿಸಲಾಗುತ್ತಿತ್ತು. ಈಗ 100 ರೂ. ನಿಗದಿಪಡಿಸಿರುವುದೂ ಜನರಿಗೆ ಹೊರೆಯಾಗಿದೆ. ಅಲ್ಲದೆ, ಪ್ರತಿ ಕ್ಲಾಸ್ಗೂ 50 ರೂ. ನಿಗದಿಪಡಿಸಲಾಗಿದೆ. ಅಂದರೆ ಲಘು ಮೋಟಾರು ವಾಹನ, ಗೂಡ್ಸ್ ವಾಹನ, ಪ್ಯಾಸೆಂಜರ್ ವಾಹನಕ್ಕೆ ಡಿಎಲ್ ಪಡೆದರೆ 150 ರೂ. ಪಾವತಿಸಬೇಕಾಗುತ್ತದೆ. ಅಲ್ಲದೆ, ಪೋಸ್ಟಲ್ ಕಳುಹಿಸುವ ವ್ಯವಸ್ಥೆ ನಿರ್ವಹಣೆ ಹೇಗೆ ಎಂಬುದನ್ನೂ ಸಾರಿಗೆ ಇಲಾಖೆ ಸ್ಪಷ್ಟಪಡಿಸಿಲ್ಲ ಎಂದು ಆರ್ಟಿಒ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಶುಲ್ಕಗಳ ಸೇರ್ಪಡೆ: ಈವರೆಗೆ ಹೊಸ ಡಿಎಲ್ಗೆ ಅರ್ಜಿ ಸಲ್ಲಿಸುವಾಗ ಪರೀಕ್ಷಾ ಶುಲ್ಕ 650 ರೂ., ಸರ್ಕಾರಕ್ಕೆ 137 ರೂ. ಹಾಗೂ ಸ್ಮಾರ್ಟ್ಕಾರ್ಡ್ ಗುತ್ತಿಗೆ ಸಂಸ್ಥೆ ರೋಸ್ವುರ್ಟಾ ಕಂಪನಿಗೆ 58 ರೂ. ಸೇರಿ 845 ರೂ. ಪಾವತಿಸಬೇಕಿತ್ತು. ಈಗ ಪರೀಕ್ಷಾ ಶುಲ್ಕ 600 ರೂ., ಸ್ಮಾರ್ಟ್ ಕಾರ್ಡ್ಗೆ 200 ರೂ., ಫಾರಂ 7 ಶುಲ್ಕ 151 ರೂ. 18 ಪೈಸೆ, ಸರ್ವೀಸ್ ಫೀಸ್ 115 ರೂ. 64 ಪೈಸೆ ಹಾಗೂ ಪೋಸ್ಟಲ್ ಚಾರ್ಜ್ 100 ರೂ. ಸೇರಿ ಒಟ್ಟು 1166 ರೂ. 82 ಪೈಸೆ ಪಾವತಿಸಬೇಕಿದೆ. ಹೊಸದಾಗಿ ಸರ್ವೀಸ್ ಫೀಸ್, ಫಾರಂ 7 ಶುಲ್ಕ ಹಾಗೂ ಪೋಸ್ಟಲ್ ಚಾರ್ಜ್ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಪೈಸೆ ರೂಪದಲ್ಲಿ ಶುಲ್ಕ ಪಾವತಿಸುವುದು ಹೇಗೆ, ಯಾವ ಆಧಾರದಲ್ಲಿ ನಿಗದಿಪಡಿಸಲಾಗಿದೆ ಎಂಬುದೂ ಗೊಂದಲ ಸೃಷ್ಟಿಸಿದೆ.
ಆನ್ಲೈನ್ನಲ್ಲಿ ಅರ್ಜಿ ಸ್ವೀಕರಿಸಿಲ್ಲ: ದಿಢೀರನೆ ಹೊಸ ಶುಲ್ಕ ನಿಗದಿಪಡಿಸಿರುವುದರಿಂದ ಈ ಹಿಂದೆ ಪಾವತಿಸಿದ್ದ ಶುಲ್ಕದ ಆಧಾರದಲ್ಲಿ ಗುರುವಾರ ಆನ್ಲೈನ್ನಲ್ಲಿ ಅರ್ಜಿಗಳು ಸ್ವೀಕೃತಗೊಳ್ಳದೆ ಆರ್ಟಿಒ ಅಧಿಕಾರಿಗಳು ಸಂಕಷ್ಟ ಅನುಭವಿಸಬೇಕಾಯಿತು. ಹೆಚ್ಚುವರಿ ಶುಲ್ಕ ಪಾವತಿಸಲು ಅರ್ಜಿದಾರರು ಸಿದ್ಧರಿಲ್ಲ. ಹೀಗಾಗಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ.
ಡಿ.15ರಂದೇ ನೋಟಿಫಿಕೇಷನ್: ಹೊಸ ಶುಲ್ಕ ರಚನೆ, ವ್ಯವಸ್ಥೆ ಬಗ್ಗೆ ಡಿ.15ರಂದೇ ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ. ಆರ್ಟಿಒ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಬುಧವಾರ ರಾತ್ರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇಮೇಲ್ನಲ್ಲಿ ನೋಟಿಫಿಕೇಷನ್ ಕಳುಹಿಸ ಲಾಗಿದೆ. ಗುರುವಾರ ಬೆಳಗ್ಗೆ ಆರ್ಟಿಒ ಕಚೇರಿಗಳು ಆರಂಭ ಆದಾಗಲೇ ಹೊಸ ವ್ಯವಸ್ಥೆ ಬಗ್ಗೆ ಮಾಹಿತಿ ಗೊತ್ತಾಗಿದೆ.
ಶುಲ್ಕ ಕಟ್ಟಿದರಷ್ಟೇ ಸ್ಮಾರ್ಟ್ಕಾರ್ಡ್: ಸ್ಮಾರ್ಟ್ಕಾರ್ಡ್ ವಿತರಣೆಗೆ ಗುತ್ತಿಗೆ ಪಡೆಯಲಾಗಿದೆ. ನಮಗೆ ಹಣ ಪಾವತಿಸಿದರೆ ಮಾತ್ರ ಅರ್ಜಿದಾರನ ಭಾವಚಿತ್ರ ಹಾಗೂ ಬಯೋಮೆಟ್ರಿಕ್ ವಿವರ ಸಂಗ್ರಹಿಸಿ, ಕಾರ್ಡ್ ವಿತರಣೆ ಮಾಡುತ್ತೇವೆ. ಸರ್ಕಾರವೇ ನೇರವಾಗಿ ಹಣ ಸ್ವೀಕರಿಸಿದರೆ, ನಾವು ಕಾರ್ಡ್ ವಿತರಣೆ ಮಾಡುವುದಿಲ್ಲ ಎಂದು ರೋಸ್ವುರ್ಟಾ ಸಂಸ್ಥೆ ಹೇಳಿಕೊಂಡಿದೆ.