ಎದೆನೋವಿನಿಂದ ಅಸ್ವಸ್ಥಗೊಂಡ ಉಬರ್ ಚಾಲಕ: ಸ್ವತಃ ಕಾರು ಚಲಾಯಿಸಿ ಮಾನವೀಯತೆ ಮೆರೆದ ಮಹಿಳೆ! Driver

Driver
Published on

Driver : ಪ್ರಯಾಣದ ಸಮಯದಲ್ಲಿ ಉಬರ್ ಚಾಲಕನಿಗೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಸ್ವತಃ ಕಾರು ಚಲಾಯಿಸಿ ಮಾನವೀಯತೆ ಮೆರೆದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಕಾರು ಚಲಾಯಿಸಿದ ಮಹಿಳೆ, ತನ್ನ ಮಗಳು, ತಾಯಿ ಮತ್ತು ಅಜ್ಜಿಯೊಂದಿಗೆ ಗುರುಗ್ರಾಮ್‌ನಿಂದ ದೆಹಲಿಗೆ ಉಬರ್​ ಕ್ಯಾಬ್​ನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಕಾರು ಚಾಲಕನಿಗೆ ಅನಾರೋಗ್ಯ ಕಾಡಿದೆ. ಚಾಲಕ ಎದೆ ನೋವಿನಿಂದ ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಮಹಿಳೆ, ಸ್ವತಃ ಕಾರು ಚಾಲನೆ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದರು.

ಮಹಿಳೆಯ ಹೆಸರು ಅಮಾಯ್ರಾ. ಇವರು ಮೇಕಪ್​ ಆರ್ಟಿಸ್ಟ್​ ಆಗಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿ ಅಮಾಯ್ರಾ ಅವರು ಎಲ್ಲಾ ಮಹಿಳೆಯರು ಡ್ರೈವಿಂಗ್ ಕಲಿಯಬೇಕೆಂದು ಸಲಹೆ ನೀಡಿದ್ದಾರೆ. ನನ್ನ ಡ್ರೈವಿಂಗ್ ಸ್ಕಿಲ್​ ಹೇಗಿದೆ ಅಂತ​ ಪ್ರಯಾಣದ ಸಮಯದಲ್ಲಿ ನಿರಾಳವಾಗಿದ್ದ ಉಬರ್ ಚಾಲಕನನ್ನು ಅಮಾಯ್ರಾ ತಮಾಷೆಯಾಗಿ ಕೇಳುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಕಾಮೆಂಟ್​ ವಿಭಾಗದಲ್ಲಿ ಅನೇಕ ನೆಟ್ಟಿಗರು ಅಮಾಯ್ರಾರನ್ನು ಕೊಂಡಾಡುತ್ತಿದ್ದಾರೆ.

ಇನ್ನೂ ಮಾನವೀಯತೆ ಮರೆಯಾಗಿಲ್ಲ ಅನ್ನುವುದಕ್ಕೆ ಈ ಘಟನೆ ಸಾಕ್ಷಿ. ಮಾನವೀಯತೆಯೇ ಮೊದಲು ಮತ್ತು ನಿಮ್ಮ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಅನೇಕ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net