

ನವದೆಹಲಿ: ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ಗೆ ಮತ್ತೊಮ್ಮೆ ಜನಾಂಗೀಯ ನಿಂದನೆ ವಿವಾದದ ಬಿಸಿ ತಟ್ಟಿದೆ. ಐಪಿಎಲ್ನಲ್ಲಿ ಭಾನುವಾರ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ರನ್ನು ಲಂಡನ್ನ "ಕಪ್ಪು ಟ್ಯಾಕ್ಸಿ'ಗೆ ಹೋಲಿಸಿ ಮಾತನಾಡಿದ್ದಕ್ಕೆ ಹರ್ಭಜನ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ.
ಆರ್ಚರ್ ಎಸೆದ ಸನ್ರೈಸರ್ಸ್ ಇನಿಂಗ್ಸ್ನ 18ನೇ ಓವರ್ನಲ್ಲಿ ಹೆನ್ರಿಕ್ ಕ್ಲಾಸೆನ್ ಸತತ 2 ಬೌಂಡರಿ ಬಾರಿಸಿದಾಗ ಹರ್ಭಜನ್, "ಲಂಡನ್ನಲ್ಲಿ ಕಪ್ಪು ಟ್ಯಾಕ್ಸಿಗಳ ಮೀಟರ್ ಬಹಳ ವೇಗವಾಗಿ ಓಡುತ್ತದೆ ಮತ್ತು ಇಲ್ಲಿ ಆರ್ಚರ್ ಅವರ ಮೀಟರ್ ಕೂಡ ವೇಗವಾಗಿ ಓಡುತ್ತಿದೆ' ಎಂದು ಹೇಳಿದ್ದರು. ಇದು ಜನಾಂಗೀಯ ನಿಂದನೆ ಎಂದು ಆರೋಪಿಸಿರುವ ನೆಟ್ಟಿಗರು, ಹರ್ಭಜನ್ರನ್ನು ಕೂಡಲೆ ಐಪಿಎಲ್ ಕಾಮೆಂಟರಿಯಿಂದ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.
ಹರ್ಭಜನ್ ಈ ಹಿಂದೆ ಕ್ರಿಕೆಟಿಗರಾಗಿದ್ದಾಗ 2008ರ ಸಿಡ್ನಿ ಟೆಸ್ಟ್ ವೇಳೆ ಆಸೀಸ್ ಆಲ್ರೌಂಡರ್ ಆಂಡ್ರೋ ಸೈಮಂಡ್ಸ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಎದುರಾಗಿತ್ತು. "ಮಂಕಿಗೇಟ್' ಎಂದೇ ಜನಪ್ರಿಯವಾಗಿದ್ದ ಈ ಪ್ರಕರಣದಲ್ಲಿ ಹರ್ಭಜನ್ ನಿಷೇಧದಂಥ ಕಠಿಣ ಶಿಕ್ಷೆ ಯಿಂದ ಪಾರಾಗಿದ್ದರು.